ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಹಾವಳಿ ಬಲು ಜೋರಾಗಿದೆ. ದಿನದಿಂದ ದಿನಕ್ಕೆ ಮೊಬೈಲ್ ಬಳಕೆದಾರರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಈ ಸ್ಮಾರ್ಟ್ಫೋನ್ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮನೆಗೆ ಬಂದರೆ ಸಾಕು ತಂದೆ-ತಾಯಿ ಬಳಸುವ ಫೋನ್ ಅನ್ನು ಕಸಿದು ಒಂದು ಮೂಲೆಯಲ್ಲಿ ಕುಳಿತುಬಿಟ್ಟರೆ ಮುಗಿಯಿತು!
ಕಡಿಮೆ ದರದ ಇಂಟರ್ನೆಟ್, ದಿನದ 24 ಗಂಟೆಯೂ 5ಜಿ ಜತೆ ಕೈಗೆಟುಕುವ ದರದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಆಕರ್ಷಕ ಸ್ಮಾರ್ಟ್ಫೋನ್. ಇಷ್ಟೆಲ್ಲಾ ಸುಲಭವಾಗಿ ಲಭ್ಯವಿರುವಾಗ ಮೊಬೈಲ್ ಬಳಕೆಯಲ್ಲಿ ಇಳಿಕೆ ಕಾಣಬೇಕು ಎಂದರೆ ಹೇಗೆ ಸಾಧ್ಯ? ಪ್ರತಿ ಮನೆಯಲ್ಲಿ ಕನಿಷ್ಠ ಎಂದರೆ ಮೂರರಿಂದ ನಾಲ್ಕು ಫೋನ್ಗಳು ಇದೆ. ಹೀಗಿದ್ದಮೇಲೆ ಬಳಕೆದಾರರ ಸಂಖ್ಯೆ ಕೂಡ ಅಧಿಕವಾಗಿದೆ. ಜನರ ಜೀವನಶೈಲಿಯನ್ನೇ ಬದಲಾಯಿಸಿರುವ ಸ್ಮಾರ್ಟ್ಫೋನ್ಗಳು ಭಾವನೆಗಳನ್ನು ಬಂಧಿಸಿ, ಜನರನ್ನು ತಲೆತಗ್ಗಿಸಿಯೇ ಇರುವಂತೆ ಮಾಡಿಬಿಟ್ಟಿದೆ. ಸದ್ಯ ಇದೇ ಹಾದಿಯಲ್ಲಿ ಮಕ್ಕಳು ಕೂಡ ಮುಂದುವರಿದಿದ್ದು, ಮೊಬೈಲ್ ಇಲ್ಲದಿದ್ದರೆ ಊಟ, ಪಾಠ ಏನು ಬೇಡ ಎನ್ನುವಷ್ಟರ ಮಟ್ಟಿಗೆ ಸ್ಮಾರ್ಟ್ಫೋನ್ ಜಾಲಕ್ಕೆ ಸಿಲುಕಿದ್ದಾರೆ.
ಮೊಬೈಲ್ ಕಿತ್ತುಕೊಂಡರೆ ಮಕ್ಕಳ ಅಳಲು, ಊಟ ಮಾಡದಿದ್ದರೆ ಸ್ಮಾಟ್ಫೋನ್ ಕೊಟ್ಟು ಊಟ ಮಾಡಿಸುವುದು ಹೀಗೆ ಪೋಷಕರ ನಾನಾ ಸಮಸ್ಯೆಗಳನ್ನು ಬಹಳ ಸೂಕ್ಷ್ಮವಾಗಿ ಅರಿತ ಶಿಕ್ಷಕಿಯೊಬ್ಬರು ತಮ್ಮ ಶಾಲಾ ಮಕ್ಕಳು ಮೊಬೈಲ್ ಮುಟ್ಟಲು ಭಯಪಡಬೇಕು ಆ ರೀತಿ ಎಚ್ಚರಿಸಲು ಒಂದು ವಿನೂತನ ಪ್ರಯತ್ನ ಮಾಡಿ ಇದೀಗ ಯಶಸ್ವಿಯಾಗಿದ್ದಾರೆ. ಪ್ರಾರ್ಥನೆಗೆಂದು ಶಾಲಾ ಆವರಣದಲ್ಲಿ ನಿಂತಿದ್ದ ಮಕ್ಕಳ ಎದುರು ತನ್ನ ಮುಖದ ಎಡಭಾಗವನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಬಂದ ಶಿಕ್ಷಕಿ, ಅತೀ ಹೆಚ್ಚಾಗಿ ಮೊಬೈಲ್ ಬಳಕೆ ಮಾಡಿದ ಕಾರಣ ಕಣ್ಣಿನಿಂದ ರಕ್ತ, ಮುಖದಲ್ಲಿ ಭೀಕರ ಗಾಯ ಆಗಿದೆ ಎಂದು ವಿದ್ಯಾರ್ಥಿಗಳಿಗೆ ತೋರಿಸಿದ್ದಾರೆ.
ಬೆಳಗ್ಗೆ, ರಾತ್ರಿ ತುಂಬ ಮೊಬೈಲ್ ಬಳಕೆ ಮಾಡಿದ ಪರಿಣಾಮ ನನ್ನ ಮುಖ ಹೀಗಾಯಿತು. ನೀವು ಸ್ಮಾರ್ಟ್ಫೋನ್ ಮುಟ್ಟಬೇಡಿ ಪ್ಲೀಸ್ ಎಂದು ಶಿಕ್ಷಕಿ ಮಕ್ಕಳ ಬಳಿ ಮನವಿ ಮಾಡಿದ್ದಾರೆ. ಇದನ್ನು ನೋಡ್ತಿದ್ದಂತೆ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಸಹ ಶಿಕ್ಷಕಿಯರು ಮೊಬೈಲ್ ಹಿಡಿಯುವಂತೆ ಕೈಗೆ ಕೊಟ್ಟರು ಕೂಡ ಇಲ್ಲ ನನಗೆ ಬೇಡ ಎಂದು ದೂರ ತಳ್ಳಿದ್ದಾರೆ. ಇಲ್ಲ ಪರವಾಗಿಲ್ಲ, ಏನು ಆಗುವುದಿಲ್ಲ ತೆಗೆದುಕೊಳ್ಳಿ ಎಂದು ಮಕ್ಕಳಿಗೆ ಒತ್ತಾಯಿಸಿದರೆ, ಅವರು ಬೇಡ, ನಮ್ಮ ಶಿಕ್ಷಕಿಗೆ ಆದ ಪರಿಸ್ಥಿತಿ ನಮಗೂ ಬರುತ್ತದೆ, ಇದನ್ನು ನಾವು ಮುಟ್ಟುವುದಿಲ್ಲ ಎಂದು ಸ್ಮಾರ್ಟ್ಫೋನ್ ಬಿಸಾಡಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ನೆಟ್ಟಿಗರ ಗಮನಸೆಳೆದಿದ್ದು, ಪೋಷಕರು ಶಿಕ್ಷಕಿಯ ಪ್ರಯತ್ನವನ್ನು ಮೆಚ್ಚಿ, ಕೊಂಡಾಡಿದ್ದಾರೆ.