ಪೆರ್ಲ: ಓಣಂ ಆಚರಣೆ ಮೂಲಕ ಸಮಾಜದ ಎಲ್ಲ ಜನರು ಸೇರಿ ಸೌಹಾರ್ದ ವಾತಾವರಣ ನಿರ್ಮಾಣವಾಗಬೇಕು ಎಂದು ಡಾ.ಶಂಕರ ನಾರಾಯಣ ಭಟ್ ಪೆರ್ಲ ಅಭಿಪ್ರಾಯಪಟ್ಟರು.
ಅವರು ನಲ್ಕ ವಾಗ್ದೇವಿ ಶಾಲೆಯಲ್ಲಿ ಭಗತ್ ಸಿಂಗ್ ಗ್ರಂಥಾಲಯ,ಅಕ್ಷಯ ಯುವಕ ಮಂಡಲ, ಶಾಲಾ ಶಿಕ್ಷಕ ವರ್ಗ,ಊರ ಹತ್ತು ಸಮಸ್ತರ ಜಂಟಿ ಆಶ್ರಯದಲ್ಲಿ ನಡೆದ ಓಣಂ ಆಚರಣೆಯನ್ನು ಹೂವಿನ ರಂಗೋಲಿಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಶಾಲೆಯಲ್ಲಿ ಕಲಿತು ಉತ್ತಮ ನಾಗರಿಕರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ವಾಗ್ದೇವಿ ಸೇವಾ ಸಮಿತಿ ಅಧ್ಯಕ್ಷ,ಕವಿ ನಾರಾಯಣ ನಾಯ್ಕ್ ಭಾಗವಹಿಸಿ ಓಣಂ ಹಬ್ಬದ ಹಿನ್ನೆಲೆ ವಿವರಿಸಿದರು. ಗ್ರಾ.ಪಂ.ಸದಸ್ಯೆ ಆಶಾಲತಾ ಮಾತನಾಡಿ ಶುಭ ಹಾರೈಸಿದರು. ಶಾಲಾ ಮುಖ್ಯ ಶಿಕ್ಷಕ ಶ್ರೀಪತಿ ಹಬ್ಬದ ಸಂಭ್ರಮ ವಿವರಿಸಿದರು. ಹಿರಿಯ ವ್ಯಾಪಾರಿ ಅಬ್ಬಾಸ್ ಶುಭ ಹಾರೈಸಿ ನಾಡಿನಲ್ಲಿ ಹಬ್ಬ ಆಚರಣೆಯ ಮಹತ್ವ ವಿವರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಕೃಷಿಕ ಕಿನಿಲ ಸುಬ್ರಾಯ ಭಟ್ ಓಟೆಕ್ಕಾಡು ಅವರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯನ್ನು ಮಮತಾ ನೆರವೇರಿಸಿದರು.ಗ್ರಂಥಾಲಯ ಅಧ್ಯಕ್ಷ ಶ್ರೀಧರ ಭಟ್ ಬೀಡುಬೈಲು ಅಧ್ಯಕ್ಷತೆ ವಹಿಸಿ ಎಲ್ಲರ ಸಹಕಾರದಿಂದ ಉತ್ತಮ ಕಾರ್ಯಕ್ರಮ ನೀಡಲು ಸಾಧ್ಯ ಎಂದು ಹೇಳಿದರು. ಸುಮಾರು 250 ಜನರು ಭಾಗವಹಿಸಿದ ಓಣಂ ಔತಣದಲ್ಲಿ 17 ಬಗೆಯ ಖಾದ್ಯಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಶಿಕ್ಷಕರಾದ ಹರ್ಷಿತ್ ಸ್ವಾಗತಿಸಿ, ನಳಿನಿ ವಂದಿಸಿದರು. ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು. ಶಶಿಧರ ಕುಲಾಲ್, ಗಂಗಾಧರ ಕುಲಾಲ್, ವಿನೋದ್, ಅಬೂಬಕ್ಕರ್, ,ಮಶ್ ಹುದಾ,ಈಶ್ವರ ನಾಯಕ್ ಕೇರಿಮೂಲೆ,, ಚಂದ್ರಶೇಖರ ಕುದುಕೋಳಿ,ಪ್ರೇಮ ಭಟ್,ಸುಶ್ಮಾ ಶಶಿಧರ್ ಮುಂತಾದವರು ನೇತೃತ್ವ ವಹಿಸಿದ್ದರು.