ಕಾಸರಗೋಡು: ಓಣಂ ಹಬ್ಬದ ಕಾಲಾವಧಿಯಲ್ಲಿ ಸಪ್ಲೈಕೋ ಸಂಸ್ಥೆಯು ಅಕ್ಕಿ, ಸಕ್ಕರೆ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏಕಾಏಕಿ ಹೆಚ್ಚಿಸುವ ಮೂಲಕ ಕುಟುಂಬದ ಆರ್ಥಿಕ ಲೆಕ್ಕಾಚಾರವನ್ನು ಬುಡಮೇಳುಗೊಳಿಸಿರುವುದಾಗಿ ಮಹಿಳಾಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ಆರೋಪಿಸಿದ್ದಾರೆ.
ಆಹಾರ ಮತ್ತು ಸಾರ್ವಜನಿಕ ಸರಬರಾಜು ಖಾತೆ ಸಚಿವರು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಡವರಿಗೆ ಸಬ್ಸಿಡಿ ಕಡಿತಗೊಳಿಸುವಲ್ಲಿ ಸರ್ಕಾರ ತೋರುವ ತನ್ನ ಧೋರಣೆಯನ್ನು ಆಡಳಿತ ವೆಚ್ಚ ಕಡಿಮೆ ಮಾಡುವಲ್ಲಿ ತೋರದಿರುವುದು ಖಂಡನೀಯ. ಸಚಿವರು ತಮ್ಮ ಕಚೇರಿ ನವೀಕರಿಸುವುದು, ಹೊಸ ಕಾರುಗಳನ್ನು ಖರೀದಿ, ಹೊಸ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಸರ್ಕಾರ ದುಂದುವೆಚ್ಚ ಮುಂದುವರಿಸುತ್ತಿದ್ದರೆ, ಬೆಲೆಯೇರಿಕೆ ಮೂಲಕ ಬಡಜನತೆಯ ಹೊಟ್ಟೆಗೆ ಕಲ್ಲುಹಾಕುತ್ತಿದೆ. ಒಂದೂವರೆ ಕೋಟಿ ವೆಚ್ಚದಲ್ಲಿ ಖರೀದಿಸಿದ ನವಕೇರಳ ಬಸ್ ದುರಸ್ತಿಗಾಗಿ ಮತ್ತೆ ಬೆಂಗಳೂರಿಗೆ ಶಿಫ್ಟ್ ಆಗುತ್ತಿದೆ. ಮ್ಯೂಸಿಯಂಗೆ ಹೋಗಿಬಂದು, ದಿನನಿತ್ಯ ಸೇವೆ ನಡೆಸಿದರೂ ನವಕೇರಳ ಬಸ್‍ಗೆ ಪ್ರಯಾಣಿಕರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಐದು ರಾಜ್ಯಗಳ 100 ಸಿನಿಮಾ ಮಂದಿರಗಳಲ್ಲಿ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಪಿಣರಾಯಿ ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ವಿಡಿಯೋ ಜಾಹೀರಾತು ನೀಡಿದೆ. ವಿವಿಧ ಸಮಾಜ ಕಲ್ಯಾಣ ಪಿಂಚಣಿಗಳ ವಿತರಣೆಯಲ್ಲಿ ಬಾಕಿ ಉಳಿಸಿಕೊಂಡಿರುವ ಎಡರಂಗ ಸರ್ಕಾರಕ್ಕೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾರೀ ಹಿನ್ನಡೆ ಅನುಭವಿಸಬೇಕಾಗಿ ಬಂದಿದ್ದರೂ, ಎಡಪಕ್ಷಗಳು ಪಾಠ ಕಲಿತಿಲ್ಲ ಎಂಬುದು ಸ್ಪಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಪಿಣರಾಯಿ ಸರ್ಕಾರ ಹಿಂಪಡೆಯಲು ಸಿದ್ಧರಾಗದಿದ್ದರೆ ಮಹಿಳಾ ಸಮುದಾಯವು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅಶ್ವಿನಿ ತಿಳಿಸಿದ್ದಾರೆ.