ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡು ವಿದೇಶಕ್ಕೆ ಪರಾರಿಯಾಗುವ ಮಧ್ಯೆ ಆರೋಪಿಯನ್ನು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಕಲ್ಲೂರಾವಿ ನಿವಾಸಿ, ಗಲ್ಫ್ ಉದ್ಯೋಗಿಯಾಗಿರುವ 44ರ ಹರೆಯದ ವ್ಯಕ್ತಿ ಬಂಧಿತ. ತನ್ನ ಮನೆಗೆ ನಿತ್ಯ ಆಗಮಿಸುತ್ತಿದ್ದ ಸಂಬಂಧಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ. ಒಂದು ತಿಂಗಳ ಹಿಂದೆ ವಿದೇಶದಿಂದ ಊರಿಗೆ ಆಗಮಿಸಿದ್ದ ಈತ, ತನ್ನ ಮನೆಗೆ ಮಲಗಲು ಬರುತ್ತಿದ್ದ 16ರ ಹರೆಯದ ಬಾಲಕಿಗೆ ರಾತ್ರಿಹೊತ್ತು ಕೊಠಡಿಗೆ ತೆರಳಿ ಕಿರುಕುಳ ನೀಡುತ್ತಿದ್ದನು. ಇದರಿಂದ ಖಿನ್ನತೆಗೊಳಗಾಗಿದ್ದ ಬಾಲಕಿ ಶಾಲೆಗೆ ತೆರಳುವುದಕ್ಕೂ ಹಿಂದೇಟು ಹಾಕುತ್ತಿದ್ದಳು, ನಿರಂತರ ರಜೆಮಾಡುತ್ತಿದ್ದ ಹಿನ್ನೆಲೆಯಲ್ಲಿ ಶಾಲಾ ಅಧಿಕಾರಿಗಳು ವಿಚಾರಿಸಿದಾಗ ಅಸೌಖ್ಯದ ಕಾರಣ ನೀಡಿದ್ದಳು. ಒಂದು ತಿಂಗಳ ಕಾಲ ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಸೋಮವಾರ ಒತ್ತಾಯಪೂರ್ವಕವಾಗಿ ಬಾಲಕಿಯನ್ನು ಶಾಲೆಗೆ ಕರೆಸಿ, ಕೌನ್ಸೆಲಿಂಗ್‍ಗೆ ಒಳಪಡಿಸಿದಾಗ ವಿಷಯ ಬಹಿರಂಗಗೊಂಡಿದೆ. ಈ ಬಗ್ಗೆ ಪೊಲೀಸರಿಗೆ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ.