ತಿರುವನಂತಪುರಂ: ಕೇರಳದಲ್ಲಿ ಖಾಸಗಿತನದ ಉಲ್ಲಂಘನೆಯಾಗುತ್ತಿರುವ ಬಗ್ಗೆ ಗವರ್ನರ್ ಆರಿಫ್ ಮುಹಮ್ಮದ್ ಖಾನ್ ಖೇದ ವ್ಯಕ್ತಪಡಿಸಿದ್ದಾರೆ. ಅನುಮತಿ ಮತ್ತು ಕಾನೂನು ಅಧಿಕಾರವಿಲ್ಲದೆ ಯಾರ ಸಂಭಾಷಣೆಯನ್ನು ರೆಕಾರ್ಡ್ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದವರು ತಿಳಿಸಿದ್ದಾರೆ. ಈ ಬಗ್ಗೆ ಗಂಭೀರವಾಗಿ ತನಿಖೆಯಾಗಬೇಕಾದ ವಿಚಾರ ಎಂದು ರಾಜ್ಯಪಾಲರು ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಬಿಗ್ ಇಂಟರ್‍ವ್ಯೂನಲ್ಲಿ ಮುಖ್ಯ ಸಂಪಾದಕ ಪ್ರದೀಪ್ ಪಿಳ್ಳೈ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ರಾಜ್ಯಪಾಲರು ಇಂತಹ ಘಟನೆಗಳ ಬಗ್ಗೆ ಮುಖ್ಯಮಂತ್ರಿಯನ್ನು ಈಗಾಗಲೇ ವರದಿ ಕೇಳಿದ್ದಾರೆ ಎಂದು ಸೂಚಿಸಿದರು.
ಭಾರತದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಎಂದಿಗೂ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದರು.
ಸಚಿವರ ಪೋನ್ ಕದ್ದಾಲಿಕೆ ನಡೆದಿದೆ ಎಂಬ ಆಡಳಿತ ಪಕ್ಷದ ಶಾಸಕ ಪಿ.ವಿ.ಅನ್ವರ್ ಆರೋಪದ ಕುರಿತು ವರದಿ ನೀಡುವಂತೆ ರಾಜ್ಯಪಾಲರು ಒತ್ತಾಯಿಸಿದರು. ಈ ಕುರಿತು ಕೂಡಲೇ ತನಿಖೆ ನಡೆಸಿ ಅದರೊಂದಿಗೆ ಕ್ರಿಯಾ ವರದಿ ಸಲ್ಲಿಸುವಂತೆ ರಾಜಭವನ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿದೆ.