ತಿರುವನಂತಪುರಂ: ಎನ್‍ಸಿಪಿಯಲ್ಲಿ ಸಚಿವ ಸ್ಥಾನದ ಪೈಪೋಟಿಯಲ್ಲಿ ಹಾಲಿ ಸಚಿವ ಎ.ಕೆ.ಶಶೀಂದ್ರನ್ ಸ್ಥಾನ ಕಳೆದುಕೊಳ್ಳುವ ಸೂಚನೆಗಳಿವೆ.
ಎ.ಕೆ. ಶಶೀಂದ್ರನ್ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ. ಒಂದು ವಾರದೊಳಗೆ ಈ ಬಗ್ಗೆ ಪ್ರಕಟಣೆ ಹೊರಬೀಳಲಿದೆ ಎಂದು ತಿಳಿದುಬಂದಿದೆ.
ವಿವಾದ ಉದ್ವಿಗ್ನವಾಗುತ್ತಿದ್ದಂತೆ ಶರತ್ ಪವಾರ್ ಶುಕ್ರವಾರ ಥಾಮಸ್ ಕೆ ಥಾಮಸ್ ಮತ್ತು ಶಶೀಂದ್ರನ್ ಅವರನ್ನು ಸಭೆಗೆ ಕರೆದರು. ಪವಾರ್ ಅವರ ನಿರ್ಧಾರ ಥಾಮಸ್ ಕೆ ಥಾಮಸ್ ಪರವಾಗಿತ್ತು. ಇದರೊಂದಿಗೆ ಶಶೀಂದ್ರನ್ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.
ಸಚಿವರ ಬದಲಾವಣೆ ವಿಚಾರದಲ್ಲಿ ಪವಾರ್ ಅವರದ್ದೇ ಅಂತಿಮ ನಿರ್ಧಾರ ಎಂದು ಎನ್ ಸಿಪಿ ರಾಜ್ಯಾಧ್ಯಕ್ಷ ಪಿ.ಸಿ.ಚಾಕೊ ತಿಳಿಸಿದ್ದು, ಒಂದು ವಾರದೊಳಗೆ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿದ್ದಾರೆ.
ಸಚಿವಾಲಯಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಶಶೀಂದ್ರನ್ ಅವರು ಈ ಹಿಂದೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದರು. ಆದರೆ ಪಿಣರಾಯಿ ಅವರು ಎನ್‍ಸಿಪಿಯ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ನಿಲುವು ತಳೆದಿದ್ದಾರೆ.
ತಮ್ಮನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಶೀಂದ್ರನ್ ಈ ಹಿಂದೆ ಬೆದರಿಕೆ ಹಾಕಿದ್ದರು. ಆದರೆ ಶರದ್ ಪವಾರ್ ಅವರಿಗೆ ಕರೆ ಮಾಡಿದಾಗ ಶಶೀಂದ್ರನ್ ಅವರು ಪಕ್ಷ ಹೇಳಿದರೆ ಹುದ್ದೆ ಬಿಟ್ಟುನೀಡುವುದಾಗಿ ತಮ್ಮ ನಿಲುವು ಬದಲಿಸಿದ್ದಾರೆ.