ನವದೆಹಲಿ: 'ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ತಮ್ಮ ಕನ್ಸಲ್ಟೆನ್ಸಿ ಸರ್ವೀಸ್ ಸಂಸ್ಥೆ 'ಅರೋರಾ ಅಡ್ವೈಸರಿ ಪ್ರೈವೆಟ್ ಲಿ.'ನಲ್ಲಿ ಶೇ 99ರಷ್ಟು ಷೇರು ಹೊಂದಿದ್ದಾರೆ. 'ಮಹಿಂದ್ರಾ ಆಯಂಡ್ ಮಹಿಂದ್ರಾ ಗ್ರೂಪ್' ಕಂಪನಿಗೂ ತಮ್ಮ ಸಂಸ್ಥೆಯ ಮೂಲಕ ಸೇವೆ ನೀಡಿದ್ದಾರೆ.
ಸಬಿ ಅಧ್ಯಕ್ಷೆ ಮಾಧವಿ ಅವರ ಕುರಿತು ಕಾಂಗ್ರೆಸ್ ತನ್ನ ಸರಣಿ ಪತ್ರಿಕಾಗೋಷ್ಠಿಯನ್ನು ಮುಂದುವರಿಸಿದ್ದು, ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಮಂಗಳವಾರ ಮತ್ತೊಂದು ಪತ್ರಿಕಾಗೋಷ್ಠಿಯ ಮೂಲಕ ಹಲವು ಆರೋಪಗಳನ್ನು ಮಾಡಿದರು.
'ಸೆಬಿ ಅಧ್ಯಕ್ಷೆಯಾದ ಬಳಿಕವೂ ಮಾಧವಿ ಅವರು ಅರೋರಾ ಸಂಸ್ಥೆಯಲ್ಲಿ ಶೇ 99ರಷ್ಟು ಷೇರು ಹೊಂದಿದ್ದಾರೆ ಎಂದು ಹಿಂಡೆನ್‌ಬರ್ಗ್ ಹೇಳಿತ್ತು. ಈ ಆರೋಪವನ್ನು ತಳ್ಳಿಹಾಕಿದ್ದ ಮಾಧವಿ, 'ನಾನು ಅಧ್ಯಕ್ಷೆಯಾದ ಬಳಿಕ ಈ ಸಂಸ್ಥೆ ನಿಷ್ಕ್ರಿಯವಾಗಿದೆ' ಎಂದಿದ್ದರು. ವಾಸ್ತವಾಂಶ ಏನೆಂದರೆ, 2024ರ ಮಾರ್ಚ್ 31ರವರೆಗಿನ ಮಾಹಿತಿಯ ಪ್ರಕಾರ ಮಾಧವಿ ಅವರು ಸಂಸ್ಥೆಯಲ್ಲಿ ಷೇರು ಹೊಂದಿದ್ದಾರೆ ಮತ್ತು ಈ ದಿನದವರೆಗೂ ಸಂಸ್ಥೆ ಚಾಲ್ತಿಯಲ್ಲಿದೆ' ಎಂದರು.
'2016-17ರಿಂದ 2023-24ರವರೆಗೆ (2017-18 ಮತ್ತು 2018-19 ಹೊರತುಪಡಿಸಿ) ಮಾಧವಿ ಅವರಿಗೆ ಅರೋರಾ ಸಂಸ್ಥೆಯ ಮೂಲಕ ₹2.95 ಕೋಟಿ ಆದಾಯ ಬಂದಿದೆ. ಈ ವರ್ಷಗಳಲ್ಲಿ ಮಾಧವಿ ಅವರು ಕೆಲವು ವರ್ಷ ಸೆಬಿಯ ಪೂರ್ಣಾವಧಿ ಸದಸ್ಯೆಯಾಗಿದ್ದರು, ನಂತರ ಸೆಬಿ ಅಧ್ಯಕ್ಷೆಯಾದರು' ಎಂದು ಮಾಹಿತಿ ನೀಡಿದರು.
'ಈ ₹2.95 ಕೋಟಿಯಲ್ಲಿ ₹2.59 ಕೋಟಿ ಆದಾಯವು ಮಹಿಂದ್ರಾ ಆಯಂಡ್ ಮಹಿಂದ್ರಾ ಕಂಪನಿ ಒಂದರಿಂದಲೇ ಸಂದಿದೆ. ಧವಳ್ ಬುಚ್ ಅವರಿಗೂ ವೈಯಕ್ತಿಕವಾಗಿ ₹4.78 ಕೋಟಿಯನ್ನು ಕಂಪನಿಯು ನೀಡಿದೆ. ಈ ಎಲ್ಲ ಬೆಳವಳಿಗೆಗಳೂ ಮಾಧವಿ ಅವರು ಸೆಬಿಯ ಪೂರ್ಣಾವಧಿ ಸದಸ್ಯೆ, ಅಧ್ಯಕ್ಷೆಯಾಗಿರುವ ಕಾಲಘಟ್ಟದಲ್ಲಿ ನಡೆದಿವೆ' ಎಂದು ವಿವರಿಸಿದರು.
'ಮಾಧವಿ ಅವರು ಮಹಿಂದ್ರಾ ಆಯಂಡ್ ಮಹಿಂದ್ರಾ ಕಂಪನಿ ಪರವಾಗಿ 5 ಆದೇಶಗಳನ್ನು ಅಥವಾ ಅನುಮೋದನೆಗಳನ್ನು ನೀಡಿದ ಅವಧಿಯಲ್ಲಿಯೇ ಧವಳ್ ಬುಚ್ ಅವರಿಗೆ ಇದೇ ಕಂಪನಿಯಿಂದ ಆದಾಯ ಸಂದಿದೆ! ಪೆಗಾಸಸ್ ಮೂಲಕ ಮಾಹಿತಿ ಸಂಗ್ರಹಿಸುವ ಪ್ರಧಾನಿ ಮೋದಿ ಅವರಿಗೆ ಮಾಧವಿ ಅವರ ಈ ಎಲ್ಲ ವ್ಯವಹಾರದ ಕುರಿತ ಮಾಹಿತಿಗಳು ಸಿಗಲಿಲ್ಲವೇ' ಎಂದು ಪವನ್ ಖೇರಾ ಪ್ರಶ್ನಿಸಿದರು.
'ಮಹಿಂದ್ರಾ ಆಯಂಡ್ ಮಹಿಂದ್ರಾ ಲಿಮಿಟೆಡ್, ಡಾ. ರೆಡ್ಡೀಸ್, ಐಸಿಐಸಿಐ, ಸೆಂಬ್‌ಕಾರ್ಪ್ ಆಯಂಡ್ ವಿಷ್ಣು ಲೀಸಿಂಗ್ ಆಯಂಡ್ ಫೈನಾನ್ಸ್, ಪಿಡಿಲೈಟ್- ಇವು ಅರೋರಾ ಸಂಸ್ಥೆಯ ಗ್ರಾಹಕರು' ಎಂದು ಕಾಂಗ್ರೆಸ್ ಹೇಳಿದೆ.