HEALTH TIPS

ಶಿಮ್ಲಾ ಬಂದ್‌: ಮಸೀದಿಯ ಅನಧಿಕೃತ ಭಾಗ ತೆರವು

 ಶಿಮ್ಲಾ: ಸಂಜೌಲಿಯಲ್ಲಿ ಮಸೀದಿಯೊಂದರ ಅನಧಿಕೃತ ಭಾಗವನ್ನು ನೆಲಸಮಗೊಳಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಕ್ರಮವನ್ನು ವಿರೋಧಿಸಿ ಹಿಮಾಚಲ ಪ್ರದೇಶದ ರಾಜಧಾನಿಯಲ್ಲಿ ಗುರುವಾರ ಮೂರು ತಾಸು ಬಂದ್‌ಗೆ ಕರೆ ನೀಡಲಾಗಿತ್ತು.

ಇದರಿಂದ ಅಂಗಡಿ ಮುಂಗಟ್ಟುಗಳು ಬಾಗಿಲುಮುಚ್ಚಿದ್ದವು.

ಶಿಮ್ಲಾದಲ್ಲಿ, ಬಿಜೆಪಿ ಜತೆ ಗುರುತಿಸಿಕೊಂಡಿರುವ ಶಿಮ್ಲಾ ಬೆಯೋಪರ್ ಮಂಡಲ್ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಬಂದ್‌ಗೆ ಕರೆ ನೀಡಿತ್ತು. ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಿ, ಪ್ರತಿಭಟನೆಯನ್ನು ನಡೆಸಿದರು.

ವರ್ತಕರ ಸಂಘಟನೆಯ ಅಧ್ಯಕ್ಷ ಸಂಜೀವ್ ಠಾಕೂರ್, ಬಂದ್ ಸಂಪೂರ್ಣ ಮತ್ತು ಶಾಂತಿಯುತವಾಗಿತ್ತು. ಶಿಮ್ಲಾ ನಗರದ ಹೊರವಲಯದಲ್ಲಿ ಅಂಗಡಿಗಳನ್ನು ಸಹ ಮುಚ್ಚಲಾಗಿತ್ತು ಎಂದು ಹೇಳಿದರು.

ಇದೇ ವೇಳೆ ಮಂಡಿ ಪಟ್ಟಣದ ಜೈಲ್ ರಸ್ತೆಯಲ್ಲಿರುವ ಮಸೀದಿಯ ಅನಧಿಕೃತ ಭಾಗವನ್ನು ಮುಸ್ಲಿಂ ಸಮುದಾಯದವರೇ ನೆಲಸಮಗೊಳಿಸಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ರಾಜ್ಯದ ಹೊರಗಿನಿಂದ ಹಿಮಾಚಲ ಪ್ರದೇಶಕ್ಕೆ ಬರುವ ಜನರ ದಾಖಲಾತಿಗಳನ್ನು ಪರಿಶೀಲಿಸಬೇಕು ಎಂದು ಬಿಜೆಪಿಯ ಮಾಜಿ ಸಚಿವ ಸುರೇಶ್ ಭಾರದ್ವಾಜ್ ಒತ್ತಾಯಿಸಿದರು.

'ಮಸೀದಿಯ ಗೋಡೆಯು ಪಿಡಬ್ಲ್ಯುಡಿ ಜಾಗದಲ್ಲಿ ಇದೆ ಎಂದು ಆಕ್ಷೇಪಿಸಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಹಾಗಾಗಿ, ನಾವು ಅನಧಿಕೃತ ಗೋಡೆಯನ್ನು ನೆಲಸಮಗೊಳಿಸಲು ನಿರ್ಧರಿಸಿದೆವು. ನಿಯಮ ಪಾಲನೆಗೆ ನಾವು ಬದ್ಧವಾಗಿದ್ದು, ಎಲ್ಲರೊಂದಿಗೂ ಭ್ರಾತೃತ್ವ ಬಯಸುತ್ತೇವೆ' ಎಂದು ಮಸೀದಿ ಸಮಿತಿ ಸದಸ್ಯ ಇಕ್ಬಾಲ್ ಅಲಿ ಹೇಳಿದರು.

ಮಸೀದಿಯಲ್ಲಿರುವ ವಿವಾದಿತ ಕಟ್ಟಡ ನೆಲಸಮಗೊಳಿಸಬೇಕು ಮತ್ತು ರಾಜ್ಯಕ್ಕೆ ಬರುವ ಹೊರಗಿನವರ ನೋಂದಣಿ ಆಗಬೇಕು ಎಂದು ಆಗ್ರಹಿಸಿ ಹಿಂದೂ ಸಂಘಟನೆಗಳು ಬುಧವಾರ ಸಂಜೌಲಿ ಬಂದ್‌ಗೆ ಕರೆ ನೀಡಿದ್ದವು.

ಬಂದ್‌ ವೇಳೆ ಬ್ಯಾರಿಕೇಡ್‌ಗಳನ್ನು ಮುರಿದಾಗ ಹಿಂದೂ ಗುಂಪುಗಳ ಪ್ರತಿಭಟನಕಾರರ ಮೇಲೆ ಪೊಲೀಸರು ಎರಡು ಬಾರಿ ಲಾಠಿ ಪ್ರಹಾರ ನಡೆಸಿದ್ದರು. ಜತೆಗೆ ಪ್ರತಿಭಟನಕಾರರನ್ನು ಚದುರಿಸಲು ಜಲ ಫಿರಂಗಿ ಬಳಸಿದ್ದರು. ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಆರು ಪೊಲೀಸ್ ಸಿಬ್ಬಂದಿ ಸೇರಿ ಹತ್ತು ಮಂದಿ ಗಾಯಗೊಂಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries