ಅಗರ್ತಲಾ: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು, ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ಮತ್ತು ಸಭಾತ್ಯಾಗದ ನಡುವೆಯೂ ತ್ರಿಪುರ ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಯಿತು.

ಲೋಕಸಭೆಯ 543 ಸ್ಥಾನಗಳ ಪೈಕಿ 293ರಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಸತತ ಮೂರನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿದೆ.
ಎನ್‌ಡಿಎ ಸರ್ಕಾರದ ಈ ಐತಿಹಾಸಿಕ ಗೆಲುವನ್ನು ಪ್ರಶಂಸಿಸುವ ನಿರ್ಣಯವನ್ನು ಸಭಾಪತಿ ವಿಶ್ವಬಂಧು ಸೇನ್ ಅವರು ಪ್ರಶ್ನೋತ್ತರ ಅವಧಿಯ ಬಳಿಕ ಮಂಡಿಸಿದರು.
ಸೇನ್ ಅವರು ನಿರ್ಣಯ ಓದಲಾರಂಭಿಸುತ್ತಿದ್ದಂತೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜೀತೇಂದ್ರ ಚೌಧರಿ ಸೇರಿದಂತೆ ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ ಸಚಿವ ರತನ್ ಲಾಲ್ ನಾಥ್ ಹಾಗೂ ಇತರರು 'ವಿಶ್ವ ಗುರು' ಘೋಷಣೆ ಮೊಳಗಿಸಿ ತಿರುಗೇಟು ನೀಡುವ ಪ್ರಯತ್ನ ಮಾಡಿದರು. ಬಳಿಕ ಪ್ರತಿಭಟನೆ ನಡೆಸಿದ ಸಿಪಿಐ(ಎಂ), ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿದರು. ಆದರ ನಡುವೆಯೂ ನಿರ್ಣಯ ಮಂಡಿಸಲಾಯಿತು.
'ಇತ್ತೀಚೆಗೆ ಮುಕ್ತಾಯವಾದ ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಎಲ್ಲ ಸದಸ್ಯರಿಗೆ ತ್ರಿಪುರಾ ವಿಧಾನಸಭೆಯು ಇಂದು ಶುಭಾಶಯ ಕೋರುತ್ತದೆ. ಸತತ ಮೂರನೇ ಬಾರಿ ವಿಜಯ ದಾಖಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸದನ ಅಭಿನಂದನೆ ತಿಳಿಸುತ್ತದೆ. ಈ ಗೆಲುವು ಭಾರತದ ಅಭಿವೃದ್ಧಿ, ಪ್ರಗತಿ ಮತ್ತು ಮೂಲಸೌಕರ್ಯವನ್ನು ಪೋಷಿಸಲಿದೆ ಎಂಬ ನಿರೀಕ್ಷೆ ಇದೆ' ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.