ಕೋಲ್ಕತ್ತ: ಮುಷ್ಕರ ನಿರತ ವೈದ್ಯರ ಬೇಡಿಕೆಯಂತೆ ಕೋಲ್ಕತ್ತದ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದ್ದು, ಅವರ ಸ್ಥಾನಕ್ಕೆ ನಿಯೋಜನೆಗೊಂಡ ಹಿರಿಯ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ವರ್ಮಾ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಯುವ ವೈದ್ಯರು ನಡೆಸುತ್ತಿರುವ ಮುಷ್ಕರವನ್ನು ಅಂತ್ಯಗೊಳಿಸಿ, ಕರ್ತವ್ಯಕ್ಕೆ ಮರಳುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಾಲ್ಕು ಬಾರಿ ಪ್ರಯತ್ನಿಸಿ ವಿಫಲಗೊಂಡಿದ್ದರು. ಅಂತಿಮವಾಗಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ವೈದ್ಯರ ಬೇಡಿಕೆ ಈಡೇರಿಸಲು ಒಪ್ಪಿಕೊಂಡಿದ್ದರು.
ಸರ್ಕಾರ ಹಾಗೂ ವೈದ್ಯರ ನಡುವಿನ ಒಪ್ಪಂದದ ಭಾಗವಾಗಿ ಆರೋಗ್ಯ ಇಲಾಖೆಯ ನಿರ್ದೇಶಕ ದೇಬಶಿಶ್ ಹಲ್ದೆರ್, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಕೌಸ್ತವ ನಾಯಕ್ ಹಾಗೂ ಕೋಲ್ಕತ್ತ ಪೊಲಿಸ್‌ನ ಉತ್ತರ ವಿಭಾಗದ ಡಿಸಿಪಿ ಅಭಿಷೇಕ್ ಗುಪ್ತಾ ಅವರನ್ನು ಅವರ ಸ್ಥಾನಗಳಿಂದ ಎತ್ತಂಗಡಿ ಮಾಡಲಾಗಿದೆ.
ಆರೋಗ್ಯ ಇಲಾಖೆಯ ನೂತನ ನಿರ್ದೇಶಕರಾಗಿ ಸ್ವಪನ್ ಸೊರೇನ್ ಅವರನ್ನು ನಿಯೋಜಿಸಲಾಗಿದೆ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಸ್ಥಾನಕ್ಕೆ ಯಾರನ್ನೂ ನಿಯೋಜಿಸಿಲ್ಲ.
ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಮರ್ಪಕವಾಗಿ ನಿರ್ವಹಿಸದ ಗೋಯಲ್ ಅವರ ಎತ್ತಂಗಡಿಗೆ ವೈದ್ಯರು ಪಟ್ಟು ಹಿಡಿದಿದ್ದರು. ಸೋಮವಾರ ಮಧ್ಯ ರಾತ್ರಿಯವರೆಗೂ ನಡೆದ ಸುದೀರ್ಘ ಚರ್ಚೆಯ ನಂತರ ಮಮತಾ ಬ್ಯಾನರ್ಜಿ ಈ ನಿರ್ಧಾರ ಘೋಷಿಸಿದ್ದರು. ಇದಾದ ಬೆನ್ನಲ್ಲೇ ನೂತನ ಪೊಲೀಸ್ ಆಯುಕ್ತರ ಹೆಸರನ್ನು ಸೋಮವಾರ ಅಂತಿಮಗೊಳಿಸಿದ್ದಾರೆ.
ಗೋಯಲ್ ಅವರು 1994ರ ತಂಡದ ಐಪಿಎಸ್ ಅಧಿಕಾರಿಯಾಗಿದ್ದಾರೆ. ಎಡಿಜಿಪಿಯಾಗಿದ್ದ ಅವರು ವಿಶೇಷ ಕಾರ್ಯಪಡೆಯ ಐಜಿಪಿಯಾಗಿದ್ದರು. 56 ವರ್ಷದ ವರ್ಮಾ ಅವರು 1998ರ ತಂಡದ ಐಜಿಪಿ ಅಧಿಕಾರಿಯಾಗಿದ್ದಾರೆ. ಇವರು ಈ ಮೊದಲು ಎಡಿಜಿಪಿಯಾಗಿದ್ದರು. ಈ ಇಬ್ಬರು ಅಧಿಕಾರಿಗಳು ಐಐಟಿಯ ವಿದ್ಯಾರ್ಥಿಗಳಾಗಿದ್ದಾರೆ. ಈ ವರ್ಗಾವಣೆಯು ಯಾವುದೇ ಬಡ್ತಿ ಅಥವಾ ಹಿಂಬಡ್ತಿಯಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಡಿಸಿಪಿ ಗುಪ್ತಾ ಅವರು ಗೋಯಲ್ ಅವರ ಆಪ್ತ ಎಂದೇ ಆರೋಪಿಸಲಾಗಿದೆ. ಕೊಲೆಯಾದ ದಿನ ಮೃತ ವೈದ್ಯೆಯ ಪಾಲಕರಿಗೆ ಗುಪ್ತ ಹಣದ ಆಮಿಷ ಒಡ್ಡಿದ್ದ. ಪ್ಲಾಸ್ಟಿಕ್ ಚೀಲದಲ್ಲಿ ಹಣವನ್ನು ಕೊಂಡಿಯ್ದಿದ್ದ ಎಂದು ಪಾಲಕರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಗುಪ್ತಾ ಅವರನ್ನು ಕೂಡಾ ಎತ್ತಂಗಡಿ ಮಾಡಲಾಗಿದೆ.