ಜಮ್ಮು: 'ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ನಮ್ಮ ಹೋರಾಟ ಮುಂದುವರಿಯಲಿದೆ. ಆ ಹೋರಾಟವನ್ನು ನಾವು ಕೈಬಿಡುವುದಿಲ್ಲ. ನನಗೀಗ 83 ವರ್ಷ. ನಾನು ಅಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಬದುಕಿರುತ್ತೇನೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಥುವಾ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಖರ್ಗೆ ಇಂದು (ಭಾನುವಾರ) ಮಾತನಾಡಿದರು.
ಭಾಷಣದ ವೇಳೆ ಅಸ್ವಸ್ಥರಾದ ಖರ್ಗೆ ಅವರಿಗೆ ವೈದ್ಯಕೀಯ ನೆರವನ್ನು ಒದಗಿಸಲಾಯಿತು.
'ಬಿಜೆಪಿ ಸರ್ಕಾರವು ಜಮ್ಮು-ಕಾಶ್ಮೀರವನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿದೆ' ಎಂದು ಅವರು ಆರೋಪಿಸಿದರು.
'ಕಣಿವೆ ರಾಜ್ಯದಲ್ಲಿ ಚುನಾವಣೆ ನಡೆಸಲು ಬಿಜೆಪಿ ಎಂದಿಗೂ ಬಯಸಿಲ್ಲ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದ ಬಳಿಕವಷ್ಟೇ ಚುನಾವಣೆ ನಡೆಸಲು ಮುಂದಾಗಿತ್ತು' ಎಂದು ಹೇಳಿದರು.
'ಅಧಿಕಾರ ಇದ್ದರೂ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ಬಿಜೆಪಿ ಏಕೆ ವಿಳಂಬ ಮಾಡುತ್ತಿದೆ? ಜಮ್ಮು ಕಾಶ್ಮೀರದ ಜನರಿಗಾಗಿ ನಾವು ಹೋರಾಡಲಿದ್ದೇವೆ. ಬಿಜೆಪಿ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ' ಎಂದು ಅವರು ಹೇಳಿದ್ದಾರೆ.
'ಜಮ್ಮು-ಕಾಶ್ಮೀರದ ಯುವ ಜನತೆಯ ಭವಿಷ್ಯಕ್ಕಾಗಿ ಮೋದಿ, ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಿಜ ಸಂಗತಿಯೆಂದರೆ ಕಳೆದ 10 ವರ್ಷಗಳಲ್ಲಿ ಯುವಜನತೆಯನ್ನು ಕತ್ತಲೆಯತ್ತ ತಳ್ಳಿ ಹಾಕಿದ್ದಾರೆ. ಇದಕ್ಕೆ ಮೋದಿ ಕೂಡ ಹೊಣೆಗಾರರು. ಪ್ರಧಾನಿ ಅವರು ಕಳೆದ 10 ವರ್ಷಗಳಲ್ಲಿ ಯುವಜನತೆಗಾಗಿ ಏನನ್ನೂ ಮಾಡಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
ಆರಾಮಾಗಿದ್ದಾರೆ: ಪ್ರಿಯಾಂಕ್
'ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತಮಾಡುತ್ತಿದ್ದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯದಲ್ಲಿ ಏರುಪೇರಾಯಿತು. ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿದೆ. ಅವರಿಗೆ ತುಸು ರಕ್ತದೊತ್ತಡ ಹೆಚ್ಚಾಗಿದೆ. ಆದರೆ ಈಗ ಅವರ ಆರೋಗ್ಯ ಸ್ಥಿರವಾಗಿದೆ. ನೀವೆಲ್ಲರೂ ತೋರಿದ ಕಾಳಜಿಗೆ ಧನ್ಯವಾದಗಳು. ಅವರ ದೃಢತೆ ಹಾಗೂ ನಿಮ್ಮೆಲ್ಲರ ಹಾರೈಕೆಯು ಅವರಿಗೆ ಇನ್ನಷ್ಟು ಬಲ ತುಂಬುತ್ತದೆ' ಎಂದು ಖರ್ಗೆ ಅವರ ಮಗ ಹಾಗೂ ಕರ್ನಾಟಕ ಸರ್ಕಾರದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ 'ಎಕ್ಸ್'ನಲ್ಲಿ ಪೋಸ್ಟ್ ಹಾಕಿದ್ದಾರೆ.
'ಎಕ್ಸ್'ನಲ್ಲಿ ಲೇವಡಿ
'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಗ್ರವಾದವು ಹೆಚ್ಚಾಗುತ್ತದೆ- ಸರ್ ಖರ್ಗೆ. ಅವರಿಗೆ ಆರೋಗ್ಯ ಎಷ್ಟೊಂದು ಸರಿ ಇಲ್ಲವೆಂದರೆ ಅವರು ಸತ್ಯ ಮಾತನಾಡುತ್ತಿದ್ದಾರೆ. ಅವರನ್ನು ಮನೆಯಲ್ಲಿ ಕೂರಿಸಿ ಆರಾಮ ನೀಡಿ. ಪ್ರಚಾರ ಮಾಡುವಂತೆ ಅವರನ್ನು ಗಾಂಧಿ-ನೆಹರೂ ಕುಟುಂಬವು ಒತ್ತಾಯಿಸುತ್ತಿದೆ ಎಂದೆನಿಸುತ್ತದೆ. ಹದಗೆಟ್ಟ ಆರೋಗ್ಯ ಸ್ಥಿತಿಯನ್ನು ಬಳಸಿಕೊಂಡು ಅನುಕಂಪದಲ್ಲಿ ಮತ ಪಡೆಯಬಹುದು ಎಂಬುದು ಆ ಕುಟುಂಬದದ ಯೋಜನೆ ಇರಬಹುದು' ಎನ್ನುವ ಪೋಸ್ಟ್‌ವೊಂದು 'ಎಕ್ಸ್'ನಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್‌ಗೆ 7758 ಲೈಕ್ಸ್ ಬಂದಿದ್ದು 2374 ಮಂದಿ ಇದನ್ನು ರೀಪೋಸ್ಟ್ ಮಾಡಿದ್ದಾರೆ. ಭಾಷಣ ಮಾಡುವ ವೇಳೆಯಲ್ಲಿಯೇ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಹದಗೆಟ್ಟಿತು. ಆದರೂ ಅವರು ತಮ್ಮ ಭಾಷಣವನ್ನು ನಿಲ್ಲಿಸಲಿಲ್ಲ. ಎಚ್ಚರ ತಪ್ಪಿದ ಸ್ಥಿತಿಯಲ್ಲಿಯೇ ಸಣ್ಣ ದನಿಯಲ್ಲಿ ತೊದಲುತ್ತಾ ಮಾತು ಮುಂದುವರಿಸಿದ ವೇಳೆ 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಗ್ರವಾದ ಹೆಚ್ಚಾಗುತ್ತದೆ' ಎಂದಿದ್ದಾರೆ. ಈ ವಿಡಿಯೊವನ್ನು ಹಂಚಿಕೊಂಡು ಹಲವರು ಮೇಲಿನಂತೆ ಪೋಸ್ಟ್ ಮಾಡುತ್ತಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯೆಗಳೂ ಬಂದಿದ್ದು 'ಖರ್ಗೆ ಅವರ ಅನಾರೋಗ್ಯವು ಕಾಂಗ್ರೆಸ್‌ನ ಹೊಸ ಅನುಕಂಪದ ಅಸ್ತ್ರ' ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು 'ಏನೇ ಮಾಡಿದರು ಸತ್ಯವು ಬಾಯಿಗೆ ಬಂದೇ ಬಿಡುತ್ತದೆ' ಎಂದಿದ್ದಾರೆ. 'ಎಷ್ಟೇ ಮುಚ್ಚಿಟ್ಟರು ಸತ್ಯ ಹೊರಗೆ ಬಂದೇ ಬರುತ್ತದೆ. ಕೊನೆಗೂ ಕಾಂಗ್ರೆಸ್ ಅಧ್ಯಕ್ಷರ ಬಾಯಿಯಿಂದ ಸತ್ಯ ಹೊರಬಂದಿದೆ' 'ಇಂದು ಕಟು ಸತ್ಯವನ್ನು ಹೊರಹಾಕುವ ಮೂಲಕ ಖರ್ಗೆ ಅವರು ನಮ್ಮೆಲ್ಲರ ಹೃದಯ ಗೆದ್ದಿದ್ದಾರೆ' ಎಂಬೆಲ್ಲಾ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.
ಗೆಲುವು ಯಾರಿಗೆ?
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಜುಮ್ಮು ಮತ್ತು ಕಾಶ್ಮೀರದ ಚುನಾವಣಾ ಪ್ರಚಾರವು ಭಾನುವಾರ ಅಂತ್ಯಗೊಂಡಿದೆ. ಅಕ್ಟೋಬರ್ 1ರಂದು ಕೊನೇ ಹಂತದ ಮತದಾನ ನಡೆಯಲಿದೆ. ಮೂರು ದಶಕಗಳ ಬಳಿಕ ಈ ಬಾರಿಯ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ದಾಳಿ ಅಥವಾ ಅಹಿತಕರ ಘಟನೆ ನಡೆದಿಲ್ಲ. ಕಾಶ್ಮೀರದ ಮಟ್ಟಿಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಹಾಗೂ ಪಿಡಿಪಿ ಮಧ್ಯೆಯೇ ನೇರ ಹಣಾಹಣಿ ಇದೆ. ಸಣ್ಣ ಪುಟ್ಟ ಪಕ್ಷಗಳು ಕಣದಲ್ಲಿ ಇದ್ದರೂ ಈ ಎರಡು ಪಕ್ಷಗಳ ಪ್ರಾಲಬ್ಯವೇ ಹೆಚ್ಚು. ಪಿಡಿಪಿಯು 'ಬಿಜೆಪಿ ವಿರೋಧ'ಕ್ಕೆ ತನ್ನ ಪ್ರಚಾರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಇತ್ತ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು 'ಪಿಡಿಪಿಯು 2014ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ರಾಜ್ಯ ಸ್ಥಾನಮಾನ ರದ್ದಾದ ಬಳಿಕ ಈಗ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತಿದೆ. ಇದು ಜನರಿಗೆ ಎಸೆದ ದ್ರೋಹ' ಎನ್ನುವ ವಾದವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದೆ. ಆದರೆ ಎರಡೂ ಪಕ್ಷಗಳು ರಾಜ್ಯ ಸ್ಥಾನಮಾನವನ್ನು ತಂದು ಕೊಡುವುದಾಗಿ ಭರವಸೆ ನೀಡಿವೆ. ಜಮ್ಮುವಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆಯೇ ನೇರ ಹಣಾಹಣಿ ಇದೆ. ರಾಜ್ಯ ಸ್ಥಾನಮಾನ ಮರಳಿ ನೀಡುತ್ತೇವೆ ಎನ್ನುವುದಕ್ಕೇ ಹೆಚ್ಚು ಒತ್ತು ನೀಡಿ ಕಾಂಗ್ರೆಸ್ ಪ್ರಚಾರ ನಡೆಸಿದೆ. ಕುಟುಂಬ ರಾಜಕಾರಣ ಫಾರೂಕ್ ಅಬ್ದುಲ್ಲಾ-ಓಮರ್ ಅಬ್ದುಲ್ಲಾ ಹಾಗೂ ನೆಹರೂ-ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಬಿಜೆಪಿ ಪ್ರಚಾರ ನಡೆಸಿದೆ. ಅಕ್ಟೋಬರ್ 8ರಂದು ಫಲಿತಾಂಶ ಹೊರಬೀಳಲಿದೆ.