ಕೋಲ್ಕತ್ತ : ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ, ಆಕೆಯ ಹತ್ಯೆ ಪ್ರಕರಣದ ಅಪರಾಧಿಗಳಿಗೆ ಅಸಾಮಾನ್ಯ ಅನ್ನಿಸುವಂತಹ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕೋಲ್ಕತ್ತದಲ್ಲಿ ವಿವಿಧ ಶಾಲೆಗಳ ಶಿಕ್ಷಕರು ಪ್ರತಿಭಟನೆ ನಡೆಸಿದರು.
ಶಿಕ್ಷಕರು ಸಿಯಾಲದಹ ನಿಲ್ದಾಣದಿಂದ ಶ್ಯಾಮ್‌ಬಜಾರ್‌ವರೆಗೆ ಕಾಲ್ನಡಿಗೆಯಲ್ಲಿ ಸಾಗಿದರು.
ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗಬೇಕು, ಅಪರಾಧಿಗಳನ್ನು ಪಾರುಮಾಡಲು ಯತ್ನಿಸುವವರಿಗೆ ಕೂಡ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಭದ್ರತೆ ಕಲ್ಪಿಸಬೇಕು ಎಂದು ಕೋರಿದರು.
ಸಾಯನ್ ಲಹಿರಿ ಬಿಡುಗಡೆ
ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಖಂಡಿಸಿ ಆಗಸ್ಟ್ 27ರಂದು ನಡೆದ ಪ್ರತಿಭಟನೆಯ ಆಯೋಜಕರಲ್ಲಿ ಒಬ್ಬರು ಎನ್ನಲಾದ ಸಾಯನ್ ಲಹಿರಿ ಅವರನ್ನು ಕೋಲ್ಕತ್ತ ಪೊಲೀಸರು ತಮ್ಮ ವಶದಿಂದ ಶನಿವಾರ ಬಿಡುಗಡೆ ಮಾಡಿದ್ದಾರೆ. ಲಹಿರಿ ವಿರುದ್ಧ ಕ್ರಮ ಕೈಗೊಂಡಿರುವುದನ್ನು ರದ್ದುಪಡಿಸಬೇಕು ಎಂದು ಕೋರಿ ಅವರ ತಾಯಿ ಅಂಜಲಿ ಕಲ್ಕತ್ತ ಹೈಕೋರ್ಟ್ ಮೊರೆಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಲಹಿರಿ ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿತ್ತು. ಪಶ್ಚಿಮ ಬಂಗ ಛಾತ್ರ ಸಮಾಜದ ನಾಯಕರಲ್ಲಿ ಒಬ್ಬರಾದ ಲಹಿರಿ ಅವರನ್ನು ಆಗಸ್ಟ್ 27ರ ಸಂಜೆ ಬಂಧಿಸಲಾಗಿತ್ತು. ಬಿಡುಗಡೆ ನಂತರ ಲಹಿರಿ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರಿಗೆ ಧನ್ಯವಾದ ಅರ್ಪಿಸಿದರು. ಬಿಜೆಪಿ ನಾಯಕರಾದ ಅಧಿಕಾರಿ ಅವರು ಕಷ್ಟದ ಸಮಯದಲ್ಲಿ ತಮ್ಮ ಜೊತೆ ನಿಂತಿದ್ದರು ಎಂದು ಲಹಿರಿ ಹೇಳಿದರು.
ಕಾರ್ಯಕ್ರಮ ಮುಂದೂಡಿದ ಶ್ರೇಯಾ ಘೋಷಾಲ್
ಆರ್.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆಯು ತಮ್ಮ ಮೇಲೆ ಬಹಳ ಆಳವಾದ ಪರಿಣಾಮ ಬೀರಿದೆ ಎಂದು ಹೇಳಿರುವ ಗಾಯಕಿ ಶ್ರೇಯಾ ಘೋಷಾಲ್ ಕೋಲ್ಕತ್ತದಲ್ಲಿ ನಡೆಯಬೇಕಿದ್ದ ತಮ್ಮ ಕಾರ್ಯಕ್ರಮವೊಂದನ್ನು ಮುಂದೂಡಿದ್ದಾರೆ. 'ಈ ಕಾರ್ಯಕ್ರಮವನ್ನು ಎಲ್ಲರೂ ಬಹಳವಾಗಿ ನಿರೀಕ್ಷಿಸುತ್ತಿದ್ದರು. ಆದರೆ ಒಂದು ನಿಲುವು ತೆಗೆದುಕೊಂಡು ನಿಮ್ಮೆಲ್ಲರ ಜೊತೆ ನಿಲ್ಲುವುದು ನನಗೆ ಅನಿವಾರ್ಯವಾಗಿದೆ' ಎಂದು ಅವರು ಎಕ್ಸ್ ವೇದಿಕೆಯಲ್ಲಿ ಬರೆದಿದ್ದಾರೆ. ಕಾರ್ಯಕ್ರಮವು ಸೆಪ್ಟೆಂಬರ್ 14ರಂದು ನಡೆಯಬೇಕಿತ್ತು.