ಕಾಸರಗೋಡು: ಕಂದಾಯ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಭೂಮಿಯ ಡಿಜಿಟಲ್ ರೀಸರ್ವೇಯನ್ನು ಕಾಲಮಿತಿಯೊಳಗೆ ಪೂರ್ತಿಗೊಳಿಸಲಾಗುವುದು ಎಂದು ಕಂದಾಯ-ವಸತಿ ಖಾತೆ ಸಚಿವ ಕೆ. ರಾಜನ್ ಹೇಳಿದರು.
ಅವರು ಕೇರಳದಲ್ಲಿ ಒಟ್ಟು 26 ಕಟ್ಟಡಗಳನ್ನು ಸ್ಮಾರ್ಟ್ ಗ್ರಾಮ ಕಚೇರಿಗಳಾಗಿ ಪರಿವರ್ತಿಸಲು ಕಟ್ಟಡಗಳ ಶಿಲಾನ್ಯಾಸ ಸಮಾರಂಭವನ್ನು ಆನ್‍ಲೈನ್ ಮೂಲಕ ನೆರವೇರಿಸಿ ಮಾತನಾಡಿದರು. ಕೇರಳದಲ್ಲಿ 4,58,250 ಹೆಕ್ಟೇರ್ ಭೂಮಿ ಈಗಾಗಲೇ ಡಿಜಿಟಲ್ ಸಮೀಕ್ಷೆಗೊಳಪಡಿಸಲಾಗಿದೆ. ನಾಲ್ಕು ವರ್ಷಗಳಲ್ಲಿ ಕೇರಳವನ್ನು ಸಂಪೂರ್ಣವಾಗಿ ಡಿಜಿಟಲ್ ವ್ಯವಸ್ಥೆಯೊಂದಿಗೆ ಅಳೆಯುವ ಡಿಜಿಟಲ್ ರಿಸರ್ವೇ ನಡೆಸಲಾಗುತ್ತಿದೆ. ನೋಂದಣಿ, ಸಮೀಕ್ಷೆ,ಕಂದಾಯ ಇಲಾಖೆಗಳ ಆನ್‍ಲೈನ್ ಪೆÇೀರ್ಟಲ್‍ಗಳ ಏಕೀಕರಣದೊಂದಿಗೆ ಕೇರಳವು ದೇಶದಲ್ಲಿ ಮೊದಲ ಬಾರಿಗೆ ಸಮಗ್ರ ಪೆÇೀರ್ಟಲ್‍ನೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಕೇರಳದಲ್ಲಿ ಈಗಾಗಲೇ 520 ಗ್ರಾಮ ಕಚೇರಿಗಳು ಸ್ಮಾರ್ಟ್ ಆಗಿವೆ. ಎಲ್ಲರಿಗೂ ಭೂಮಿ, ಎಲ್ಲ ಭೂಮಿಗೆ ದಾಖಲೆ, ಎಲ್ಲ ಸೇವೆಗಳು ಸ್ಮಾರ್ಟ್ ಎಂಬ ಧ್ಯೇಯವಾಕ್ಯದೊಂದಿಗೆ ಇಲಾಖೆ ಮುನ್ನಡೆಯುತ್ತಿದೆ. ಕೇರಳದಲ್ಲಿ ಮೂರೂವರೆ ವರ್ಷದಲ್ಲಿ 1,80887 ಜನರಿಗೆ ಭೂಮಿಯ ಹಕ್ಕುಪತ್ರ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ತ್ರಿಕರಿಪುರ ಗ್ರಾಮದ ಸ್ಮಾರ್ಟ್ ವಿಲೇಜ್ ಕಚೇರಿಯ ಶಿಲಾನ್ಯಾಸ ಸಮಾರಂಭದಲ್ಲಿ ಶಾಸಕ ಎಂ. ರಾಜಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಮನು, ತ್ರಿಕರಿಪುರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ. ಸೌದಾ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸ್ವಾಗತಿಸಿದರು. ಹೊಸದುರ್ಗ ತಹಸೀಲ್ದಾರ್ ಟಿ.ಜಯಪ್ರಸಾದ್ ವಂದಿಸಿದರು.