ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಬಲಿವಾಡು ಕೂಟದ ಸಂದರ್ಭ ಪ್ರಗತಿಪರ ಕೃಷಿಕ, ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು, ವೈದ್ಯಕೀಯ ವೃತ್ತಿಯನ್ನು ಕಲಿತರೂ ಕೃಷಿಯನ್ನೇ ತನ್ನ ಉಸಿರಾಗಿಸಿರುವ ಸರಳ ಸಜ್ಜನ ಡಾ. ವೇಣುಗೋಪಾಲ ಕಳೆಯತ್ತೋಡಿ ಇವರನ್ನು ಗೌರವಿಸಲಾಯಿತು.
ಶ್ರೀನಿವಾಸ ಆಳ್ವ ಕಳತ್ತೂರು ಅಧ್ಯಕ್ಷತೆ ವಹಿಸಿದ್ದರು. ಅಗಲ್ಪಾಡಿ ಶಾಲಾ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅಧ್ಯಾಪಕ ರಾಜಾರಾಮ ಕುಂಜಾರು, ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಹಾಗೂ ನಾಲ್ಕು ಚಿನ್ನದ ಪದಕವನ್ನು ಪಡೆದ ಕಾಸರಗೋಡಿನ ಕನ್ನಡದ ಹೆಮ್ಮೆಯ ಪುತ್ರಿ ಕುಮಾರಿ ಅನುಶ್ರೀ ಪಟ್ಟಾಜೆ ಇವರ ಸಾಧನೆಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.