ಕಾಸರಗೋಡು: ಸ್ವಚ್ಛತಾ ಹಿ ಸೇವಾ 2024 ಅನ್ವಯ 'ಪ್ರಕೃತಿಯ ಸ್ವಚ್ಛತೆ-ಸಂಸ್ಕøತಿಯ ಸ್ವಚ್ಛತೆ' ಎಂಬ ಘೋಷಣೆಯೊಂದಿಗೆ ಐಸಿಎಆರ್-ಸಿಪಿಸಿಆರ್‍ಐ ನಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಚ್ಛತೆಗೆ ಆದ್ಯತೆ ನೀಡದಿದ್ದಲ್ಲಿ, ಯಾವುದೇ ಅಭಿವೃದ್ಧಿ ಕೆಲಸಗಳು ಶೂನ್ಯವಾಗುವುದು. ಸ್ವಚ್ಛತಾ ಉಪಕ್ರಮಗಳ ಬಗ್ಗೆ ನಿರಂತರ ಅಭಿಯಾನ ನಡೆಸುವಂತಾಗಬೇಕು ಎಂದು ತಿಳಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಶುಚೀಕರಣ ಕಾರ್ಯಕರ್ತರನ್ನು ಗೌರವದಿಂದ ಕಾಣುವುದರ ಜತೆಗೆ ಪ್ರತಿಯೊಬ್ಬ ತಮ್ಮ ಮನೆ ಹಾಗೂ ವಠಾರವನ್ನು ಶುಚಿಯಾಗಿರಿಸಿಕೊಳ್ಳುವ ಸಂಸ್ಕøತಿ ಬೆಳೆಸಿಕೊಂಡಾಗ ಸಮಾಜ ಶುಚಿಯಾಗಿರುತ್ತದೆ ಎಂದು ತಿಳಿಸಿದರು.
ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕ ಕೆ. ಬಾಲಚಂದ್ರ ಹೆಬ್ಬಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಅತಿಥಿಗಳು ಮತ್ತು ಸಿಪಿಸಿಆರ್‍ಐ ಸಿಬ್ಬಂದಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಿದರು. ಸಂಸ್ಥೆಯ ಶುಚೀಕರಣ ಕಾರ್ಯಕರ್ತರನ್ನು ಮುಖ್ಯ ಅತಿಥಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶುಚಿತ್ವ ಮಿಶನ್ನಿನ ಮಾಲಿನ್ಯ ಮುಕ್ತ ನವ ಕೇರಳ ಅಭಿಯಾನದ ಸಂಯೋಜಕ ಎಚ್.ಕೃಷ್ಣನ್ ಅವರು 'ಮನೆ ಮಟ್ಟದಲ್ಲಿ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ'ಯ ಕುರಿತು ತರಗತಿ ನಡೆಸಿದರು. ಎಐಸಿಆರ್‍ಪಿ-ಪಾಮ್ಸ್ ಕಾರ್ಯಕ್ರಮ ಸಂಯೋಜಕ ಡಾ.ಬಿ.ಎ. ಜೆರಾರ್ಡ್ ವಂದಿಸಿದರು.