ಕಾಸರಗೋಡು: ನಾಗರಿಕ ಪೂರೈಕೆ ಇಲಾಖೆ ಅಧೀನದಲ್ಲಿ ಕಾರ್ಯಾಚರಿಸುವ ಸಪ್ಲೈಕೋ ಮೂರು ಸಬ್ಸಿಡಿ ಸಾಮಗ್ರಿಗಳ ಬೆಲೆಯನ್ನು ದಿಢೀರ್ ಏರಿಕೆ ಮಾಡುವ ಮೂಲಕ ಓಣಂ ಹಬ್ಬದ ಕಾಲಾವಧಿಯಲ್ಲಿ ಕೇರಳದ ಜನತೆಗೆ ದರ ಏರಿಕೆಯ ಬರೆ ಎಳೆದಿದೆ.
ಸಪ್ಲೈಕೋ ಪೂರೈಸುವ ಅಕ್ಕಿ, ಬೇಳೆ, ಸಕ್ಕರೆ ಬೆಲೆಯನ್ನು ಏರಿಕೆ ಮಾಡಲಾಗಿದೆ. ಸರ್ಕಾರದ ಧನಸಹಾಯದ ನಡುವೆಯೂ ಸಪ್ಲೈಕೋ ಈ ಸಾಮಗ್ರಿಗಳ ಬೆಲೆಯೇರಿಕೆ ಮಾಡಿರುವುದು ಜನತೆಯನ್ನು ಅಸಮಧಾನಕ್ಕೀಡುಮಾಡಿದೆ. ಆದರೆ ಏಳು ವರ್ಷಗಳ ನಂತರ ಬೆಲೆ ಏರಿಕೆ ಮಾಡಲಾಗಿದೆ. ಮುಕ್ತ ಮಾರುಕಟ್ಟೆಗೆ ಹೋಲಿಸಿದಲ್ಲಿ ಈ ಬೆಲೆ ಶೇ. 30ರಷ್ಟು ಕಡಿಮೆಯಿರುವುದಾಗಿ ನಾಗರಿಕ ಪೂರೈಕೆ ಖಾತೆ ಸಚಿವ ಜಿ.ಆರ್ ಅನಿಲ್ ಸಮಜಾಯಿಷಿ ನೀಡಿದ್ದಾರೆ.
ಕಿಲೋ ಒಂದಕ್ಕೆ 30ರೂ. ಇದ್ದ ಕುರುವಾ ಅಕ್ಕಿ ಬೆಲೆಯನ್ನು 33ರೂ.ಗೆ ಹೆಚ್ಚಿಸಲಾಗಿದೆ. 26ರೂ. ಇದ್ದ ಬೆಳ್ತಿಗೆ ಅಕ್ಕಿ ಬೆಲೆ 29, 111ರೂ. ಇದ್ದ ತೊಗರಿ ಬೇಳೆ ಬೆಲೆ 115, 27ರೂ. ಇದ್ದ ಸಕ್ಕರೆ ಬೆಲೆ 33ರೂ. ಆಗಿ ಹೆಚ್ಚಿಸಲಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಪ್ಕೈಕೋಗೆ ಇತ್ತೀಚೆಗಷ್ಟೆ ಸರ್ಕಾರ 225ಕೋಟಿ ರೂ. ಮಂಜೂರು ಮಾಡಿದ್ದು, ಇದರಲ್ಲಿ 150ಕೋಟಿ ರೂ. ಹಸ್ತಾಂತರಿಸಲಾಗಿದೆ. ಓಣಂ ಉತ್ಸವದ ಅಂಗವಾಗಿ ನಾನಾ ಕಡೆ ಓಣಂ ಸಂತೆ ಕಾರ್ಯಾರಂಭಿಸಿದ್ದು, ಸೆ. 14ರ ವರೆಗೆ ಕರ್ಯಾಚರಿಸಲಿದೆ.