ಮುಳ್ಳೇರಿಯ: ಕುಂಬಳೆಯಿಂದ ಬದಿಯಡ್ಕ ಹಾದಿಯಾಗಿ ಮುಳ್ಳೇರಿಯ ತೆರಳುವ ಕೆಎಸ್‍ಟಿಪಿ ರಸ್ತೆ ಮಾವಿನಕಟ್ಟೆಯಲ್ಲಿ ಅಪಘಾತ ತಾಣವಾಗಿ ಮಾರ್ಪಟ್ಟಿದ್ದು, ಸ್ಥಳೀಯ ನಿವಾಸಿಗಳು ಆತಂಕದಿಂದ ಕಾಲ ಕಳೆಯಬೇಕಾಗಿದೆ. ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆಯಲ್ಲಿ ಮರುಕಳಿಸುತ್ತಿರುವ ಅಪಘಾತಗಳಿಂದ ವಾಹನ ಚಾಲಕರನ್ನೂ ನಿದ್ದೆಗೆಡಿಸುವಂತೆ ಮಾಡಿದೆ.
ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಸ್ಥಳೀಯ ನಿವಾಸಿಗಳು ಮಾಡಿಕೊಂಡ ಮನವಿಗೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳದಿರುವುದರಿಂದ ಸ್ಥಳೀಯ ನಾಗರಿಕರು ಕ್ರಿಯಾ ಸಮಿತಿ ರಚಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಮಾವಿನಕಟ್ಟೆಯಿಂದ ಮುಂದಕ್ಕೆ ಮುಳ್ಳೇರಿಯ ತೆರಳುವ ಭಾಗದ ರಸ್ತೆ ಅಂಚಿಗೆ ಸೂಕ್ತ ಒಳಚರಂಡಿ ನಿರ್ಮಿಸದಿರುವುದರಿಂದ ರಸ್ತೆಯಲ್ಲಿ ಮಳೆನೀರು ತುಂಬಿಕೊಳ್ಳುವ ಸ್ಥಿತಿಯಿದೆ. ಇದರಿಂದ ವಾಹನಗಳು ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಸಂಚರಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕಳೆದ ಒಂದುವರೆ ತಿಂಗಳ ಅವಧಿಯಲ್ಲಿ ಎರಡು ಅಪಘಾತ ನಡೆದು, ಯುವಕನೊಬ್ಬ ಸಾವಿಗೀಡಾಗಿದ್ದಾನೆ. ಈ ಮಧ್ಯೆ ಸಣ್ಣಪುಟ್ಟ ಅಪಘಾತಗಳು ಮರುಕಳಿಸುತ್ತಿದೆ. ಈ ಪ್ರದೇಶದಲ್ಲಿ ಮಸೀದಿ, ಭಜನಾಮಂದಿರ, ಇಗರ್ಜಿ ಸೇರಿದಂತೆ ಆರಾಧನಾಲಯಗಳಿದ್ದು, ನಿರಂತರ ಜನಸಂಚಾರದ ಪ್ರದೇಶವಾಗಿದೆ. ನೂರಕ್ಕೂ ಹೆಚ್ಚು ಮದ್ರಸಾ ವಿದ್ಯಾರ್ಥಿಗಳು ಇಲ್ಲಿ ರಸ್ತೆಅಡ್ಡದಾಟಿ ಸಂಚರಿಸಬೇಕಾಗಿದ್ದು, ಯಾವುದೇ ಸುರಕ್ಷಾ ಕ್ರಮ ಅಳವಡಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ರಾತ್ರಿ ವೇಳೆ ಸಂಚಾರಕ್ಕೆ ಬೀದಿ ದೀಪವನ್ನೂ ಅಳವಡಿಸಿಲ್ಲ.
ನಾಜೂಕಾದ ರಸ್ತೆಯಲ್ಲಿ ಬಹುತೇಕ ವಾಹನಗಳು ಈ ಪ್ರದೇಶದಲ್ಲಿ ಅತ್ಯಂತ ವೇಗದಿಂದ ಸಂಚರಿಸುತ್ತಿದ್ದು, ಅಪಾಯ ಸೂಚಕ ಫಲಕಗಳನ್ನು ಅಳವಡಿಸದೆ ವಾಹನಚಾಲಕರನ್ನು ನರಕಕ್ಕೆ ತಳ್ಳುವಂತೆ ಮಾಡಿದೆ.
ಸುಳ್ಳಾದ ಭರವಸೆ:
ರಸ್ತೆಕಾಮಗಾರಿ ನಡೆಯುತ್ತಿರುವ ಮಧ್ಯೆ ಸ್ಥಳೀಯ ನಾಗರಿಕರು ಅವೈಜ್ಞಾನಿಕ ನಿರ್ಮಾಣ ಕಾಮಗಾರಿ ಬಗ್ಗೆ ಅಧಿಕಾರಿಗಳ ಗಮನಸೆಳೆದಾಗ, ಕಾಮಗಾರಿ ಪೂರ್ತಿಗೊಳ್ಳುವ ಮೊದಲು ಎಲ್ಲ ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು ನಂತರ ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಅವೈಜ್ಞಾನಿಕ ನಿರ್ಮಾಣದಿಂದ ಉಂಟಾಗುತ್ತಿರುವ ಅಪಘಾತ ತಡೆಗಟ್ಟಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ನಾಗರಿಕರು ಕ್ರಿಯಾ ಸಮಿತಿ ರಚಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.