ಕಾಸರಗೋಡು: ನೀರಿಗೆ ಬಿದ್ದು ನಾಪತ್ತೆಯಗಿರುವ ಚೆಮ್ನಾಡ್ ಕಲ್ಲುವಳಪ್ಪಿಲ್ ನಿವಾಸಿ ಮಹಮ್ಮದ್ ರಿಯಾಸ್(40)ನಿವಾಸಕ್ಕೆ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಗುರುವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಹಮ್ಮದ್ ರಿಯಾಸ್ ಪತ್ತೆಗೆ ಅಗತ್ಯ ಸಹಾಯ ಒದಗಿಸುವಂತೆ ಹಾಗೂ ನೌಕಾ ಪಡೆಯ ಸ್ಕೂಬಾ ಡೈವ್ ಮೂಲಕ ಪತ್ತೆಕಾರ್ಯ ನಡೆಸುವಂತೆ ಕೇಂದ್ರ ಸಚಿವರು ಮತ್ತು ಎನ್‍ಡಿಆರ್‍ಎಫ್ ಮಹಾನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ತಿಳಿಸಿದರು.
ಐಕ್ಯರಂಗ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹೀನ್, ಕೆ.ವಿ.ಅಬ್ದುಲ್ ಖಾದರ್, ಟಿ.ಡಿ.ಕಬೀರ್, ನೋಯೆಲ್ ಟೋಮಿನ್ ಜೋಸೆಫ್, ಅನ್ವರ್ ಮಂಗಾಟ್ ಮೊದಲಾದವರು ಸಂಸದರ ಜತೆಗಿದ್ದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಮಹಮ್ಮದ್ ರಿಯಾಸ್ ಅವರು ನೀರುಪಾಲಾದ ಕೀಯೂರು ಬಂದರು ಸನಿಹದ ಪ್ರದೇಶಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದರು. ಆಧುನಿಕ ಗಾಳದೊಂದಿಗೆ ಶನಿವಾರ ಮೀನು ಹಿಡಿಯಲು ಕೀಯೂರು ಬಂದರು ಪ್ರದೇಶಕ್ಕೆ ಆಗಮಿಸಿದ್ದ ಮಹಮ್ಮದ್ ರಿಯಾಸ್ ನಾಪತ್ತೆಯಗಿದ್ದರು.