ಕಾಸರಗೋಡು: ಚೆಮ್ನಾಡ್ ಕಲ್ಲುವಳಪ್ಪಿಲ್ ನಿವಾಸಿ ಮಹಮ್ಮದ್ ರಿಯಾಸ್(40)ನಾಪತ್ತೆಯಾಗಿದ್ದು, ಕೀಯೂರು ಬಂದರು ಸನಿಹ ಗಾಳ ಹಾಕಿ ಮೀನು ಹಿಡಿಯುವ ಮಧ್ಯೆ ನೀರುಪಾಲಾಗಿರಬೇಕೆಂದು ಸಂಶಯಿಸಲಾಗಿದೆ. ಬಂದರು ಸನಿಹ ವಾರಸುದಾರರಿಲ್ಲದ ಸ್ಥಿತಿಯಲ್ಲಿ ಸ್ಕೂಟರ್ ಹಾಗೂ ಆಧುನಿಕ ಗಾಳದ ಕಿಟ್ ಒಳಗೊಂಡ ಬ್ಯಾಗ್ ಕಂಡು ಸ್ಥಳೀಯರು ಮಾಹಿತಿ ನೀಡಿದಾಗ ಮಹಮ್ಮದ್ ರಿಯಾಸ್ ಗಾಳದೊಂದಿಗೆ ಆಗಮಿಸಿರುವ ಮಾಹಿತಿ ಲಭಿಸಿತ್ತು. ಇವರ ಮೊಬೈಲ್‍ಗೆ ಕರೆಮಾಡಿದರೂ, ಪ್ರತಿಕ್ರಿಯೆ ಲಭಿಸದಿರುವುದರಿಂದ ಇವರ ಸಹೋದರ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಒಂದು ತಿಂಗಳ ಹಿಂದೆ ವಿದೇಶದಿಂದ ಊರಿಗೆ ವಾಪಸಾಗಿದ್ದ ಇವರು, ಆಧುನಿಕ ಗಾಳದೊಂದಿಗೆ ಶನಿವಾರ ಮೀನು ಹಿಡಿಯಲು ಕೀಯೂರು ಬಂದರು ಪ್ರದೇಶಕ್ಕೆ ಆಗಮಿಸಿದ್ದರು. ನೀರಿನ ಸೆಳೆತ ಹೊಂದಿರುವ ಪ್ರದೇಶ ಇದಾಗಿದ್ದು, ನೀರುಪಾಲಾಗಿರುವ ಸಾಧ್ಯತೆಯಿರುವುದಾಗಿ ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ. ಪೊಲೀಸ್, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ನಿವಾಸಿಗಳು ಹುಡುಕಾಟ ಮುಂದುವರಿಸಿದ್ದಾರೆ.