ನವದೆಹಲಿ: ತನಗೆ ಜೀವಿತಾವಧಿವರೆಗೆ ಜೈಲು ಶಿಕ್ಷೆ ವಿಧಿಸಿ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಶ್ರದ್ಧಾನಂದ ಅಲಿಯಾಸ್ ಮುರಳಿಮನೋಹರ್ ಮಿಶ್ರಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ನಿರ್ಧರಿಸಿದೆ.
ಆದರೆ, ತನ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿ, 84 ವರ್ಷದ ಶ್ರದ್ಧಾನಂದ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪಿ.ಕೆ.ಮಿಶ್ರಾ ಹಾಗೂ ಕೆ.ವಿಶ್ವನಾಥನ್ ಅವರು ಇದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
'ನನಗೆ ಯಾವುದೇ ಪೆರೋಲ್ ಅಥವಾ ಅವಧಿಪೂರ್ವ ಬಿಡುಗಡೆ ಸವಲತ್ತು ನೀಡದ ಕಾರಣ ನಿರಂತರವಾಗಿ ಜೈಲುವಾಸದಲ್ಲಿರುವೆ. ಸೆರೆವಾಸದ ಅವಧಿಯಲ್ಲಿಯೂ ನನ್ನ ವಿರುದ್ಧ ಗುರುತರವಾದ ಯಾವುದೇ ದೂರುಗಳು ಕೇಳಿಬಂದಿಲ್ಲ. ಹೀಗಾಗಿ, ಜೀವ ಇರುವವರೆಗೆ ಜೈಲು ಶಿಕ್ಷೆ ವಿಧಿಸಿ 2008ರಲ್ಲಿ ನೀಡಿರುವ ತೀರ್ಪನ್ನು ಮರುಪರಿಶೀಲಿಸಬೇಕು' ಎಂದು ಶ್ರದ್ಧಾನಂದ ಪರ ವಕೀಲ ಅರ್ಜಿ ಸಲ್ಲಿಸಿದ್ದರು.
'ನನ್ನ ಜೈಲು ಶಿಕ್ಷೆ ಕುರಿತು ನಾನೇ ನಿರ್ಧಾರ ಕೈಗೊಳ್ಳಲು ಅನುಮತಿ ನೀಡಬೇಕು' ಎಂದು ಅರ್ಜಿದಾರನ ಮನವಿಯನ್ನೂ ಪೀಠ ತಳ್ಳಿ ಹಾಕಿತು.
'ತನಗೆ ವಿಧಿಸಿರುವ ಜೈಲು ಶಿಕ್ಷೆ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಅಪರಾಧಿಗೆ ಇಲ್ಲ' ಎಂದು ಪೀಠ ಹೇಳಿತು.
ಪ್ರಕರಣ: ಸ್ವಯಂ ಘೋಷಿತ ದೇವಮಾನವ ಎಂದು ಹೇಳಿಕೊಳ್ಳುತ್ತಿದ್ದ ಶ್ರದ್ಧಾನಂದ, ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಶಕೀರಾ ಖಲೀಲಿ ಅವರನ್ನು ಮದುವೆಯಾಗಿದ್ದರು.
ಪತ್ನಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿಯಾಗಿರುವ ಶ್ರದ್ಧಾನಂದಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಇದನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು.
ಆದರೆ, ಶಿಕ್ಷೆಯನ್ನು ಜೀವಿತಾವಧಿ ವರೆಗೆ ಜೈಲುವಾಸ ಅನುಭವಿಸಬೇಕು ಎಂದು ಮಾರ್ಪಡಿಸಿ ಸುಪ್ರೀಂ ಕೋರ್ಟ್ 2008ರಲ್ಲಿ ತೀರ್ಪು ನೀಡಿತ್ತು.
ಗಲ್ಲಿಗೇರಿಸುವಂತೆ ಮನವಿ: 'ಸುಪ್ರೀಂ' ಅಚ್ಚರಿ
ಶ್ರದ್ಧಾನಂದ ಅರ್ಜಿ ವಿಚಾರಣೆ ವೇಳೆ ಆತನ ಪರ ವಕೀಲ ಮಂಡಿಸಿದ ಬೇಡಿಕೆ ಬಗ್ಗೆ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿತು. 'ಪತ್ನಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ 30 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿರುವೆ. ಈ ಶಿಕ್ಷೆ ಮರಣದಂಡನೆಗಿಂತಲೂ ಘೋರ. ಹೀಗಾಗಿ ನನಗೆ ವಿಧಿಸಿರುವ ಶಿಕ್ಷೆಯನ್ನು ಮಾರ್ಪಡಿಸಿ ನನ್ನನ್ನು ಗಲ್ಲಿಗೇರಿಸಿ' ಎಂದು ಸ್ವಾಮಿ ಶ್ರದ್ಧಾನಂದ ಮನವಿಯನ್ನು ವಕೀಲರು ತಿಳಿಸಿದಾಗ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿತು.
'ನಾನು ಎಂದಿಗೂ ಜೈಲಿನಿಂದ ಹೊರಗೆ ಬರಲು ಸಾಧ್ಯ ಇಲ್ಲ. ಹೀಗಿರುವಾಗ ಸರ್ಕಾರ ನನಗಾಗಿ ಹಣ ವ್ಯಯಿಸುವುದಲ್ಲಿ ಯಾವುದೇ ಅರ್ಥ ಇಲ್ಲ' ಎಂದೂ ಅರ್ಜಿಯಲ್ಲಿ ವಿವರಿಸಲಾಗಿದೆ.