ತಿರುವನಂತಪುರ: ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳನ್ನು ನಿರಾಕರಿಸಿರುವ ಮಲಯಾಳ ನಟ ಜಯಸೂರ್ಯ, ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಜಯಸೂರ್ಯ, 'ಸುಳ್ಳು ಆರೋಪಗಳು ನನ್ನ ಮತ್ತು ನನ್ನ ಕುಟುಂಬವನ್ನು ಘಾಸಿಗೊಳಿಸಿವೆ' ಎಂದು ಹೇಳಿದ್ದಾರೆ.
'ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಎರಡು ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಈ ಆರೋಪಗಳನ್ನು ಕಾನೂನು ಬದ್ಧವಾಗಿಯೇ ಎದುರಿಸುತ್ತೇನೆ' ಎಂದು ಹೇಳಿದರು.
'ಆತ್ಮಸಾಕ್ಷಿ ಇಲ್ಲದವರು ಯಾರ ಮೇಲಾದರೂ ಸುಳ್ಳು ಆರೋಪ ಮಾಡಬಹುದು. ಅದು ತುಂಬಾ ಸುಲಭ. ಆದರೆ, ಕಿರುಕುಳದ ಸುಳ್ಳು ಆರೋಪವನ್ನು ಎದುರಿಸುವುದು ಕಿರುಕುಳದಷ್ಟೇ ನೋವುಂಟು ಮಾಡುತ್ತದೆ. ಸುಳ್ಳು ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ. ಆದರೆ ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬುತ್ತೇನೆ' ಎಂದು ಹೇಳಿದ್ದಾರೆ.
'ಇಂದು ನನ್ನ ಜನ್ಮದಿನ. ನನಗೆ ಶುಭ ಕೋರಿದ, ಬೆಂಬಲ ನೀಡಿ ನನ್ನೊಂದಿಗೆ ನಿಂತಿರುವ ಎಲ್ಲರಿಗೂ ಧನ್ಯವಾದಗಳು. ಹುಟ್ಟುಹಬ್ಬವನ್ನು ಅತ್ಯಂತ ನೋವಿನಿಂದ ಆಚರಿಸಲು ಸಹಕರಿಸಿದವರಿಗೂ ಧನ್ಯವಾದಗಳು. ಪಾಪ ಮಾಡದವರು ಕಲ್ಲು ಎಸೆಯಲಿ, ಆದರೆ ಅದು ಮಾಡಿದವರ ಮೇಲೆ ಎಸೆಯಲಿ' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸದ್ಯ ಜಯಸೂರ್ಯ ಮತ್ತು ಅವರ ಕುಟುಂಬ ಅಮೆರಿಕದಲ್ಲಿದ್ದು, ಅಲ್ಲಿಂದ ಹಿಂತಿರುಗಿದ ತಕ್ಷಣ ಕಾನೂನು ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.
ನ್ಯಾ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಜಯಸೂರ್ಯ ವಿರುದ್ಧ ನಟಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಕೇಳಿಬಂದಿದ್ದವು. ಅವರ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿ ತಿರುವನಂತಪುರದ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಮೊದಲ ದೂರು ದಾಖಲಾದರೆ, ಕರಮಾನಾ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು.