ಕೋಲ್ಕತ್ತ: ಬಾಸ್ಮತಿಯೇತರ ಬಿಳಿ ಅಕ್ಕಿ ಮೇಲಿನ ರಫ್ತು ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
2023ರ ಜುಲೈನಲ್ಲಿ ಬೆಲೆ ನಿಯಂತ್ರಣ ಹಾಗೂ ದೇಶದಲ್ಲಿ ಅಕ್ಕಿ ಪೂರೈಕೆಯಲ್ಲಿ ಕೊರತೆ ಉಂಟಾಗಬಾರದೆಂದು ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು.
ಬಾಸ್ಮತಿಯೇತರ ಅಕ್ಕಿ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸಿರುವುದು ಕೃಷಿ ಕ್ಷೇತ್ರದಲ್ಲಿ 'ಗೇಮ್ ಚೇಂಜರ್' ಆಗಿ ಕಾರ್ಯನಿರ್ವಹಿಸುತ್ತದೆ ಎಂದು ರೈಸ್ ವಿಲ್ಲಾ ಸಿಇಒ ಸೂರಜ್ ಅಗರವಾಲ್ ಹೇಳಿದ್ದಾರೆ.
ಈ ನಿರ್ಧಾರದಿಂದ ರಫ್ತುದಾರರ ಆದಾಯವು ಹೆಚ್ಚುತ್ತದೆ. ಮುಂಬರುವ ಹೊಸ ಬೆಳೆಗಳ ಇಳುವರಿಯಿಂದ ಹೆಚ್ಚಿನ ಆದಾಯವನ್ನು ರೈತರು ನಿರೀಕ್ಷಿಸಬಹುದು ಹಾಗೂ ಅವರ ಆರ್ಥಿಕತೆಯು ಸಬಲಗೊಳ್ಳುತ್ತದೆ ಎಂದು ಅಗರ್ವಾಲ್ ಹೇಳಿದರು.
ಬೇಯಿಸಿದ ಅಕ್ಕಿ ಮೇಲಿನ ರಫ್ತು ಸುಂಕವನ್ನು ಶೇ 20 ರಿಂದ ಶೇ 10 ಕ್ಕೆ ಇಳಿಸಲಾಗಿದೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ಸರ್ಕಾರದ ನಿರ್ಧಾರವನ್ನು ರಫ್ತುದಾರರು ಶ್ಲಾಘಿಸಿದ್ದಾರೆ.