HEALTH TIPS

ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನುವಂತಿಲ್ಲ: ಸುಪ್ರೀಂ ಕೋರ್ಟ್

 ವದೆಹಲಿ :ನ್ಯಾಯಮೂರ್ತಿಗಳು ಸ್ತ್ರೀದ್ವೇಷ ಹರಡುವ ಹಾಗೂ ಯಾವುದೇ ಸಮುದಾಯದ ಬಗ್ಗೆ ‍ಪೂರ್ವಗ್ರಹ ‍‍ಪೀಡಿತ ಹೇಳಿಕೆಗಳನ್ನು ನೀಡಬಾರದು, ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಎನ್ನಬಾರದು ಎಂದು ಸುಪ್ರೀಂ ಕೋರ್ಟ್‌ ಬುಧವಾರ (ಸೆಪ್ಟೆಂಬರ್ 25) ಹೇಳಿದೆ.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವೇದವ್ಯಾಸಾಚಾರ್‌ ಶ್ರೀಶಾನಂದ ಅವರು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಕೈಗೆತ್ತಿಕೊಂಡಿದ್ದ ವಿಚಾರಣೆಯ ಮುಕ್ತಾಯಗೊಳಿಸುವ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ನೇತೃತ್ವದ, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್ ಗವಾಯಿ, ಸೂರ್ಯಕಾಂತ ಹಾಗೂ ಋಷಿಕೇಶ್ ರಾಯ್ ಅವರಿದ್ದ ಪಂಚ ಸದಸ್ಯ ನ್ಯಾಯಪೀಠ ‍ಪ್ರಕರಣದ ವಿಚಾರಣೆ ನಡೆಸಿತು.

ವಿ.ಶ್ರೀಶಾನಂದ ಅವರು ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಿದ್ದಾರೆ ಎಂಬ ಅಂಶ ಗಮನಿಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ದೂರಿನ ವಿಚಾರಣೆಯನ್ನು ಮುಕ್ತಾಯಗೊಳಿಸಿತು.

'ನಾವು ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯಲು ಸಾಧ್ಯವಿಲ್ಲ. ಅದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ' ಎಂದು ಕೋರ್ಟ್ ಹೇಳಿತು.

ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸುವಾಗ ಅಂಕೆಯಲ್ಲಿರಬೇಕು ಎಂದು ಹೇಳಿದ ಸುಪ್ರೀಂ ಕೋರ್ಟ್‌, ಎಲೆಕ್ಟ್ರಾನಿಕ್ ಮಾಧ್ಯಮದ ಈ ಯುಗದಲ್ಲಿ ನ್ಯಾಯಾಲಯದ ಕಲಾಪಗಳ ಬಗ್ಗೆ ವ್ಯಾಪಕ ವರದಿಗಳಾಗುತ್ತವೆ ಎಂದಿತು.

'ಸಾಂದರ್ಭಿಕ ಅವಲೋಕನಗಳು ವೈಯಕ್ತಿಕ ಪಕ್ಷಪಾತವನ್ನು ಪ್ರತಿಬಿಂಬಿಸಬಹುದು. ವಿಶೇಷವಾಗಿ ನಿರ್ದಿಷ್ಟ ಲಿಂಗ ಅಥವಾ ಸಮುದಾಯದ ವಿರುದ್ಧ ಹೇಳಲಾಗಿದೆ ಎಂದು ಗ್ರಹಿಸಬಹುದು. ಆದ್ದರಿಂದ ನ್ಯಾಯಾಂಗ ಪ್ರಕ್ರಿಯೆಯ ವೇಳೆಯಲ್ಲಿ ಯಾವುದೇ ಲಿಂಗದ್ವೇಷ ಅಥವಾ ನಮ್ಮ ಸಮಾಜದ ಯಾವುದೇ ವಿಭಾಗದ ವಿರುದ್ಧವಾದಂತೆ ತೋರುವ ಟಿಪ್ಪಣಿಗಳನ್ನು ಮಾಡಬಾರದು' ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟಾರ್‌ ಜನರಲ್ ನೀಡಿದ ವರದಿಯನ್ನು ಗಮನಿಸಿದ ಕೋರ್ಟ್‌, 'ನ್ಯಾ. ಶ್ರೀಶಾನಂದರ ಹೇಳಿಕೆ ವಿಷಯಕ್ಕೆ ಸಂಬಂಧಪಟ್ಟದ್ದಾಗಿರಲಿಲ್ಲ. ಹೀಗಾಗಿ ಅಂಥವುಗಳನ್ನು ವರ್ಜಿಸಬೇಕು' ಎಂದು ಹೇಳಿತಲ್ಲದೆ, ಲಿಂಗ ಮತ್ತು ಸಮುದಾಯದ ವಿರುದ್ಧ ನ್ಯಾಯಾಧೀಶರ ಹೇಳಿಕೆಗೆ ಅಸಮ್ಮತಿಯನ್ನು ವ್ಯಕ್ತಪಡಿಸಿತು.

ಏನಿದು ಪ್ರಕರಣ?: ನ್ಯಾಯಮೂರ್ತಿ ಶ್ರೀಶಾನಂದ ಅವರು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ, 'ಬೆಂಗಳೂರಿನ ಗೋರಿಪಾಳ್ಯ ಪಾಕಿಸ್ತಾನದಂತಿದೆ' ಎಂದು ಬಣ್ಣಿಸಿದ್ದರು. ವಕೀಲೆಯೊಬ್ಬರಿಗೆ, 'ನಿಮ್ಮ ಪ್ರತಿವಾದಿ ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂಬುದನ್ನೂ ನೀವು ಹೇಳಬಲ್ಲಷ್ಟು ಅವರನ್ನು ಅರಿತಿದ್ದೀರಿ' ಎಂದು ವ್ಯಂಗ್ಯವಾಡಿದ್ದರು.

ಈ ಮೌಖಿಕ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ವಿಡಿಯೊ ತುಣುಕನ್ನು ತಮ್ಮ 'ಎಕ್ಸ್‌' ಖಾತೆಯಲ್ಲಿ ಹಂಚಿಕೊಂಡಿದ್ದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್, 'ಈ ನ್ಯಾಯಮೂರ್ತಿಗೆ ಲಿಂಗ ಸಂವೇದನಾ ತರಬೇತಿ ನೀಡುವ ಅಗತ್ಯವಿದೆ' ಎಂದಿದ್ದರು.

(ಬಾರ್‌ ಆಯಂಡ್ ಬೆಂಜ್ ಹಾಗೂ ಲೈವ್‌ಲಾ ವರದಿ ಆಧಿರಿಸಿದ ಬರೆದ ಸುದ್ದಿ)


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries