ಕಾಸರಗೋಡು: ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ಜಲ ಸಂರಕ್ಷಣೆಯ ತೆಂಗಿನ ಬುಡಕ್ಕೆ ನೀರು ಹರಿಸುವ ಯೋಜನೆಯನ್ವಯ ಸಾರ್ವಜನಿಕ ಅಭಿಯಾನದ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಸೆ.18ರಂದು ಬೇಡಡ್ಕ ಗ್ರಾಮ ಪಂಚಾಯಿತಿಯ ಜಯಪುರದಲ್ಲಿ ಜರುಗಲಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸಮಾರಂಭ ಉದ್ಘಾಟಿಸುವರು. ತೆಂಗಿನ ಇಳುವರಿ ಹೆಚ್ಚಿಸುವುದರ ಜತೆಗೆ ಜಲಸಂರಕ್ಷಣೆಗೆ ಆದ್ಯತೆ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಭಾರೀ ಮಳೆಯಿಂದಾಗಿ ಹರಿದು ಪೋಲಾಗುವ ನೀರನ್ನು ಒಡ್ಡು ನಿರ್ಮಿಸಿ ತಡೆಗಟ್ಟಿ ತೆಂಗಿನ ಮರದ ಸುತ್ತಲೂ ಮಾಡಿದ ಜಲಾನಯನದಲ್ಲಿ ನಿಲ್ಲಿಸಿ, ಅಲ್ಲೇ ಇಂಗುವಂತೆ ಮಾಡುವ ಯೋಜನೆ ಇದಾಗಿದೆ. ಈ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದರ ಜತೆಗೆ ನಾವು ಎದುರಿಸುತ್ತಿರುವ ನೀರಿನ ಕೊರತೆಯನ್ನು ನಿವಾರಿಸಲು ಯೋಜನೆಯಿಂದ ಸಹಾಯಕವಾಗಲಿದೆ ತೆಂಗಿನ ಮರದ ಬುಡದಿಂದ 1.8 ಮೀ.ನಿಂದ 2 ಮೀ. ದೂರದಲ್ಲಿ ನೀರಿನ ಒಡ್ಡು ನಿರ್ಮಿಸಲಾಗುವುದು. ಸಾಂಪ್ರದಾಯಿಕವಾಗಿ ಆಚರಣೆಯಲ್ಲಿರುವ ಈ ಕೃಷಿ ಚಟುವಟಿಕೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಕುಸಿದಿದ್ದು, ಈ ಅಭಿಯಾನದ ಮೂಲಕ ಕೃಷಿಕರನ್ನು ಮತ್ತೆ ಪ್ರೇರೇಪಿಸಲಾಗುವುದು. ಕೇರಳದ ಈ ವಿಶಿಷ್ಟ ಜಲಸಂರಕ್ಷಣಾ ವಿಧಾನವನ್ನು ಪ್ರತಿ ಮನೆಗೂ ತಲುಪಿಸಲು ಹಸಿರುಕೇರಳ ಮಿಷನ್ ಯೋಜನೆಯಿರಿಸಿಕೊಂಡಿದೆ.