ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸುಂಜ್ವಾನ್ ಸೇನಾ ಶಿಬಿರದಲ್ಲಿ ಯೋಧರೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಉಗ್ರರ ದಾಳಿಯಿಂದ ಹುತಾತ್ಮರಾಗಿರುವ ಶಂಕೆ ವ್ಯಕ್ತವಾಗಿದೆ.
ಸುಂಜ್ವಾನ್ ಮಿಲಿಟರಿ ಶಿಬಿರದಲ್ಲಿ ಯೋಧರನ್ನು ಸೆಂಟ್ರಿ ಡ್ಯೂಟಿಗಾಗಿ ನಿಯೋಜನೆ ಮಾಡಲಾಗಿತ್ತು. ಇಂದು ಬೆಳಿಗ್ಗೆ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಯೋಧ ಕಂಡು ಬಂದಿದ್ದಾರೆ. ಕೂಡಲೇ ಅವರನ್ನು ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಈ ನಡುವೆ ಉಗ್ರರ ದಾಳಿ ಕುರಿತು ಭಾರತೀಯ ಸೇನೆ ಶಂಕಿಸಿತ್ತು, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸೇನೆ ಹಾಗೂ ಪೊಲೀಸ್ ತಂಡದಿಂದ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಜೊತೆಗೆ ಡ್ರೋನ್ ಮತ್ತು ಹೆಲಿಕಾಪ್ಟರ್ ಮೂಲಕ ವೈಮಾನಿಕ ಕಣ್ಗಾವಲನ್ನು ನಿಯೋಜಿಸಲಾಗಿದೆ.
ಉಗ್ರರು ಯೋಧನ ಹತ್ಯೆಗೆ ಸ್ನೈಪರ್ ಬಂದೂಕನ್ನು ಬಳಸಿದ್ದು, ನಂತರ ಘಟನಾ ಸ್ಥಳದಿಂದ ಪಲಾಯನ ಮಾಡಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ.
ದಿನವಿಡೀ ಶೋಧ ಕಾರ್ಯ ಮುಂದುವರೆದಿದ್ದು, ರಕ್ಷಣಾ ಮೂಲಗಳ ಪ್ರಕಾರ ಡ್ರೋನ್ ಮತ್ತು ಹೆಲಿಕಾಪ್ಟರ್ ಮೂಲಕ ಯಾವುದೇ ಶಂಕಿತ ಉಗ್ರಗಾಮಿಗಳ ಚಲನವಲನಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.