ನವದೆಹಲಿ: ವಿಶ್ವಪ್ರಸಿದ್ಧ ತಾಜ್‌ಮಹಲ್ ಇರುವ ಆಗ್ರಾವನ್ನು 'ಪಾರಂಪರಿಕ ನಗರ'ವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನವದೆಹಲಿ: ವಿಶ್ವಪ್ರಸಿದ್ಧ ತಾಜ್‌ಮಹಲ್ ಇರುವ ಆಗ್ರಾವನ್ನು 'ಪಾರಂಪರಿಕ ನಗರ'ವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಒಕಾ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠವು 'ಪಾರಂಪರಿಕ ನಗರ' ಎಂದು ಘೋಷಿಸುವುದರಿಂದ ಏನು ಪ್ರಯೋಜನವಾಗಲಿದೆ ಎಂಬುದನ್ನು ನಿರೂಪಿಸಲು ಯಾವುದೇ ಕಾರಣಗಳನ್ನು ದಾಖಲಿಸಿಲ್ಲ.
ವಿಚಾರಣೆ ವೇಳೆ ಪೀಠವು 'ಈ ರೀತಿಯ ಘೋಷಣೆಯಿಂದ ಏನು ಪ್ರಯೋಜನ' ಎಂದು ವಕೀಲರನ್ನು ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ವಕೀಲರು 'ಆಗ್ರಾ ನಗರವು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವನ್ನು ಹೊಂದಿದೆ. ಹಲವಾರು ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಬೇಕಾದ ಕಾರಣ ಆಗ್ರಾವನ್ನು 'ಪಾರಂಪರಿಕ ನಗರ'ವೆಂದು ಘೋಷಿಸಬೇಕು. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಉದ್ಯೋಗ ಸೃಷ್ಟಿಯಾಗುವುದು ಹಾಗೂ ಈ ಪ್ರದೇಶದ ಸಂರಕ್ಷಣೆಗೆ ಸಹಾಯಕವಾಗಲಿದೆ' ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಒಕಾ ಅವರು 'ಒಂದು ನಗರವನ್ನು 'ಸ್ಮಾರ್ಟ್ ಸಿಟಿ' ಎಂದು ಘೋಷಿಸಿದ ಮಾತ್ರಕ್ಕೆ ಅದು ಸ್ಮಾರ್ಟ್ ಆಗುವುದಿಲ್ಲ. ಹಾಗೆಯೇ ಆಗ್ರಾವನ್ನು 'ಪಾರಂಪರಿಕ ನಗರ ಎಂದು ಘೋಷಿಸಿದರೆ, ನಗರ ಸ್ವಚ್ಛವಾಗುತ್ತದೆಯೇ? ಇದರಿಂದ ಏನೂ ಪ್ರಯೋಜನವಾಗದಿದ್ದರೆ, ಇದು ವ್ಯರ್ಥ ಪ್ರಯತ್ನವಾಗಲಿದೆ' ಎಂದರು.