ಕೋಲ್ಕತ್ತ: ಕಳೆದ ವರ್ಷ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದ ಅಪರಾಧಿಗೆ ಕೋಲ್ಕತ್ತ ನ್ಯಾಯಾಲಯ ಮರಣದಂಡನೆ ವಿಧಿಸಿ ಗುರುವಾರ ಆದೇಶಿಸಿದೆ. ಜತೆಗೆ, ಇದೊಂದು ತೀರಾ ಅಪರೂಪದ ಪ್ರಕರಣ ಎಂದು ಅಭಿಪ್ರಾಯಪಟ್ಟಿದೆ.
ಕೋಲ್ಕತ್ತ: ಕಳೆದ ವರ್ಷ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದ ಅಪರಾಧಿಗೆ ಕೋಲ್ಕತ್ತ ನ್ಯಾಯಾಲಯ ಮರಣದಂಡನೆ ವಿಧಿಸಿ ಗುರುವಾರ ಆದೇಶಿಸಿದೆ. ಜತೆಗೆ, ಇದೊಂದು ತೀರಾ ಅಪರೂಪದ ಪ್ರಕರಣ ಎಂದು ಅಭಿಪ್ರಾಯಪಟ್ಟಿದೆ.
2023ರ ಮಾರ್ಚ್ 26ರಂದು ಇಲ್ಲಿನ ತಿಲಾಜಾಲಾ ಪ್ರದೇಶದ ತನ್ನ ಮನೆಯಿಂದ ಹೊರಗೆ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳು.
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಖಚಿತವಾಗುತ್ತಿದ್ದಂತೆ, ಫ್ಲಾಟ್ ನಿವಾಸಿಯನ್ನು ಬಂಧಿಸಲಾಗಿತ್ತು.
ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕತ್ತು ಹಿಸುಕಿ ಹತ್ಯೆ ಮಾಡಲಾಗಿದೆ. ಅಲ್ಲದೇ ಆಕೆಯ ದೇಹದ ಮೇಲೆ ಆಯುಧದಿಂದ ಹಲ್ಲೆ ಮಾಡಿದ ಗಾಯದ ಗುರುತುಗಳಿದ್ದವು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿತ್ತು.
ಈ ಎಲ್ಲಾ ಕೃತ್ಯಗಳನ್ನು ಆರೋಪಿ ಎಸಗಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟ ಅಲಿಪೋರ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಸುದೀಪ್ತೋ ಭಟ್ಟಾಚಾರ್ಯ ಅವರು, ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಿದರು.
ಏಳರ ಹರೆಯದ ಬಾಲಕಿಯು ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದೆ ಘೋರ ಅಪರಾಧಕ್ಕೆ ತುತ್ತಾದಳು ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಒಂದು ವರ್ಷದೊಳಗೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲಾಯಿತು ಎಂದು ಸರ್ಕಾರಿ ವಕೀಲರಾದ ಮಾಧವಿ ಘೋಷ್ ಹೇಳಿದರು.
ರಾಜ್ಯದ ಸಂತ್ರಸ್ತ ಪರಿಹಾರ ಯೋಜನೆಯಡಿ ಮೃತ ಬಾಲಕಿಯ ತಾಯಿಗೆ ₹10 ಲಕ್ಷ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.