ಮಂಜೇಶ್ವರ : ಈದ್ ಮಿಲಾದ್ ಹಬ್ಬದ ಪ್ರಯುಕ್ತ ಉದ್ಯಾವರ ಸಾವಿರ ಜಮಾಅತ್ ವರೆಯಿಂದ ನಡೆದ ಮೆರವಣಿಗೆಯಲ್ಲಿ ಸೌಹಾರ್ದತೆ ಮತ್ತೊಮ್ಮೆ ಕಂಗೊಳಿಸಿತು. ಮೆರವಣಿಗೆಯಲ್ಲಿ ಹಿಂದೂ ಬಾಂಧವರು ಮುಸ್ಲಿಮರನ್ನು ಆತ್ಮೀಯವಾಗಿ ಸ್ವಾಗತಿಸಿ, ಸಿಹಿ ತಿಂಡಿ ವಿತರಣೆ ಮೂಲಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ದೃಶ್ಯ ಕಂಡು ಬಂತು.
ಉದ್ಯಾವರದ ಸಾವಿರ ಜಮಾಅತಿನ ವತಿಯಿಂದ ಆಯೋಜಿಸಿದ್ದ ಈ ಬೃಹತ್ ಮೆರವಣಿಗೆಯಲ್ಲಿ 13 ಮೊಹಲ್ಲಾಗಳ ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೆರವಣಿಗೆ ಕರೋಡ ಭಾಗದಲ್ಲಿ ತಲುಪುತಿದ್ದಂತೆ ಉದ್ಯಾವರ ಶ್ರೀ ಅರಸು ಮಂಜಿಷ್ಣಾರು ಕ್ಷೇತ್ರದ ದೈವಪಾತ್ರಿ ರಾಜ ಬೆಲ್ಚಾಡ ರವರ ನೇತೃತ್ವದಲ್ಲಿ ಹಿಂದೂ ಬಾಂಧವರು ಸಿಹಿ ತಿಂಡಿ ವಿತರಿಸಿದರು.
ಮುಂದುವರಿದ ಮೆರವಣಿಗೆ ಉದ್ಯಾವರಕ್ಕೆ ತಲುಪುತ್ತಿದ್ದಂತೆಯೇ ಇಲ್ಲಿನ ಹಿಂದೂ ಸಮುದಾಯವು ಸೌಹಾರ್ದತೆಯ ದ್ಯೋತಕವಾಗಿ ಮುಸ್ಲಿಂ ಬಾಂಧವರನ್ನು ಆತ್ಮೀಯವಾಗಿ ಸ್ವಾಗತಿಸಿ ಸಿಹಿ ತಿಂಡಿಗಳನ್ನು ಹಂಚಿದರು. ಬಾಂಧವ್ಯ ಮತ್ತು ಪರಸ್ಪರ ಗೌರವ ಹಾಗೂ ಹಿಂದೂ- ಮುಸ್ಲಿಂ ಭಾವೈಕ್ಯಕ್ಕೊಂದು ಸಾಕ್ಷಿಯಾಯಿತು.
ನೆರೆಯ ರಾಜ್ಯ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವಡೆ ಈದ್ ಮಿಲಾದ್ ಹಬ್ಬದ ಸಂದರ್ಭ ದ್ವೇಷ ಹಾಗೂ ಕೋಮು ಗಲಭೆಗೆ ಬಂಡವಾಳ ಹೂಡಲು ಕೆಲವರು ಪ್ರಯತ್ನಿಸುತ್ತಿರುವ ವಿಕೃತ ಪರಿಸ್ಥಿತಿಯ ಮಧ್ಯೆಯೂ ಗಡಿ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಯ ನೋಟ ಎಲ್ಲರ ಗಮನ ಸೆಳೆದಿದೆ.