ಕಾಸರಗೋಡು: ಕಾರವಾರದ ಶಿರೂರಿನ ಗಂಗಾವಳಿ ಹೊಳೆಯಲ್ಲಿ ನೀರುಪಾಲಾಗಿದ್ದ ಲಾರಿಯೊಳಗೆ ಚಿರನಿದ್ರೆಗೆ ಜಾರಿದ್ದ ಕೋಯಿಕ್ಕೋಡು ಕಣ್ಣಾಡಿಕ್ಕಲ್ ನಿವಾಸಿ ಅರ್ಜುನ್ ಮೃತದೇಹವನ್ನು 75ದಿವಸಗಳ ನಂತರ ಹುಟ್ಟೂರಿಗೆ ತಲುಪಿಸಲಾಗಿದೆ.
ಅರ್ಜುನ್ ನಿರಂತರ ತನ್ನ ಲಾರಿ ಮೂಲಕ ಪ್ರಯಾಣಿಸುತ್ತಿದ್ದ ಅದೇ ಹಾದಿಯಾಗಿ ಕಾರವಾರದಿಂದ ಕಾಸರಗೋಡು ಮೂಲಕ ಕೋಯಿಕ್ಕೋಡಿಗೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ತಲುಪಿಸಲಾಯಿತು. ಕೋಯಿಕ್ಕೋಡಿನ ಅಯಿಯೂರಿನಲ್ಲಿ ಕೇರಳ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಎ.ಕೆ ಶಶೀಂದ್ರನ್ ಅವರು ಅರ್ಜುನ್ ಮೃತದೇಹದ ಅಂತಿಮದರ್ಶನದೊಂದಿಗೆ ಬರಮಾಡಿಕೊಂಡರು. ಡಿಎನ್‍ಎ ತಪಾಸಣೆ ಪೂರ್ತಿಗೊಂಡ ನಂತರ ಕಾರವಾರದ ಜನರಲ್ ಆಸ್ಪತ್ರೆಯಿಂದ ಶುಕ್ರವಾರ ಸಂಜೆ 7.15ಕ್ಕೆ ಮೃತದೇಹದೊಂದಿಗೆ ಹೊರಟಿದ್ದ ಅಮಬುಲೆನ್ಸ್ ಶನಿವಾರ ನಸುಕಿನ 2.30ಕ್ಕೆ ಕಾಸರಗೋಡು ತಲುಪಿತ್ತು. ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ. ಹಾಗೂ ಇತರರು ಕಾಸರಗೋಡು ಹೊಸ ಬಸ್ ನಿಲ್ದಾಣ ಬಳಿ ಮೃತದೇಹಕ್ಕೆ ಪುಷ್ಪಚಕ್ರವಿರಿಸಿ ಅಂತಿಮದರ್ಶನ ಪಡೆದರು. ಆಂಬುಲೆನ್ಸ್‍ನಲ್ಲಿ ಅರ್ಜುನ್ ಸಹೋದರ ಅಭಿಜಿತ್, ಸಹೋದರಿ ಪತಿ ಜಿತಿನ್ ಜತೆಗಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಕಾರವಾರ ಶಾಸಕ ಸತೀಶ್‍ಕೃಷ್ಣ ಸೈಲ್ ಅವರೂ ತಮ್ಮ ವಾಹನದಲ್ಲಿ ಕಣ್ಣಾಡಿಕ್ಕಲ್ ವರೆಗೆ ತೆರಳಿದ್ದರು.
: ಕಾಸರಗೋಡಿನಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರು ಅರ್ಜುನ್ ಮೃತದೇಹಕ್ಕೆ ಪುಷ್ಪಚಕ್ರವಿರಿಸಿದರು(1), ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ, ಶಾಸಕ ಎ.ಕೆ.ಎಂ ಅಶ್ರಫ್ ಮೊದಲಾದವರು ಅರ್ಜುನ್ ಮೃತದೇಹದ ಅಂತಿಮದರ್ಶನ ಪಡೆದರು(2)