ಬೈರೂತ್ : ಹಿಜ್ಬುಲ್ಲಾ ಬಂಡುಕೋರರ ತಾಣವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ಬುಧವಾರವೂ ಲೆಬನಾನ್‌ನ ರಾಜಧಾನಿ ಬೈರೂತ್‌ನ ದಕ್ಷಿಣ ಭಾಗದಲ್ಲಿ ವೈಮಾನಿಕ ದಾಳಿಯನ್ನು ಮುಂದುವರಿಸಿದೆ.
ಬೈರೂತ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿರಿಯ ಕಮಾಂಡರ್ ಇಬ್ರಾಹಿಂ ಖುಬೈಸಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಲೆಬನಾನ್‌ನ ಹಿಜ್ಬುಲ್ಲಾ ದೃಢಪಡಿಸಿದೆ.
ಎರಡು ದಿನದ ವೈಮಾನಿಕ ದಾಳಿಯಲ್ಲಿ 50 ಮಕ್ಕಳು, 94 ಮಹಿಳೆಯರು ಸೇರಿದಂತೆ 558 ಜನರು ಮೃತಪಟ್ಟಿದ್ದು, 1,835 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವ ಫಿರಾಸ್ ಅಬಿಯಾದ್ ತಿಳಿಸಿದ್ದಾರೆ.
'ಹಿಜ್ಬುಲ್ಲಾದ ಕ್ಷಿಪಣಿ ಮತ್ತು ರಾಕೆಟ್ ವಿಭಾಗದ ಕಮಾಂಡರ್ ಇಬ್ರಾಹಿಂ ಖುಬೈಸಿ ಅವರನ್ನು ಹತ್ಯೆ ಮಾಡಿದ್ದೇವೆ. ಇಸ್ರೇಲ್ ಮೇಲೆ ಹಿಜ್ಬುಲ್ಲಾ ನಡೆಸುತ್ತಿದ್ದ ಕ್ಷಿಪಣಿ ದಾಳಿಗೆ ಅವರು ಕಾರಣರಾಗಿದ್ದರು' ಎಂದು ಇಸ್ರೇಲ್ ಸೇನೆ ತಿಳಿಸಿತ್ತು.
'ಹಿಜ್ಬುಲ್ಲಾ ಬಂಡುಕೋರರನ್ನು ಲೆಬನಾನ್‌ನಿಂದ ಹೊರಹಾಕಲು ಇಸ್ರೇಲ್ ಎಲ್ಲ ಪ್ರಯತ್ನ ಮಾಡಲಿದೆ' ಎಂದು ಸೇನಾ ವಕ್ತಾರ, ಡೇನಿಯಲ್ ಹಗರಿ ಹೇಳಿದ್ದಾರೆ.
'ಲೆಬನಾನ್‌ನಲ್ಲಿ ಕಳೆದ 20 ವರ್ಷಗಳಿಂದ ಹಿಜ್ಬುಲ್ಲಾ ಬಂಡುಕೋರರನ್ನು ಏನು ಮಾಡಿದ್ದಾರೆ ಎಂಬುದನ್ನು ನಾವು ವಿವರಿಸಲು ಬಯಸುತ್ತೇವೆ. ದಕ್ಷಿಣ ಲೆಬನಾನ್‌ನಲ್ಲಿ ಸಾವಿರಾರು ನಾಗರಿಕ ಮನೆಗಳನ್ನು ಭಯೋತ್ಪಾದಕ ನೆಲೆಗಳಾಗಿ ಪರಿವರ್ತಿಸಿದ್ದರು. ಜತೆಗೆ, ಯುದ್ಧ ವಲಯವನ್ನಾಗಿ ಪರಿವರ್ತಿಸಿದ್ದರು' ಎಂದು ಡೇನಿಯಲ್ ಹಗರಿ ವಾಗ್ದಾಳಿ ನಡೆಸಿದ್ದಾರೆ.