ಚಂಡೀಗಢ: ತಮ್ಮ ಮುಂಬರುವ ಚಿತ್ರ 'ಎಮರ್ಜೆನ್ಸಿ'ಯಲ್ಲಿ ಸಿಖ್ಖರ ಗೌರವಕ್ಕೆ ಧಕ್ಕೆ ತಂದ ಆರೋಪದ ಮೇಲೆ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಇತರರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಎನ್‌ಜಿಒ ಲಾಯರ್ಸ್ ಫಾರ್ ಹ್ಯುಮಾನಿಟಿ ಅಧ್ಯಕ್ಷರೂ ಆಗಿರುವ ವಕೀಲ ರವೀಂದರ್ ಸಿಂಗ್ ಬಸ್ಸಿ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಚಂಡೀಗಢ ಜಿಲ್ಲಾ ನ್ಯಾಯಾಲಯ, ಪ್ರತಿವಾದಿಗಳಿಗೆ ಡಿಸೆಂಬರ್ 5 ರೊಳಗೆ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಿದೆ.
ಕಂಗನಾ ಮತ್ತು ಇತರ ಪ್ರತಿವಾದಿಗಳು 'ಎಮರ್ಜೆನ್ಸಿ' ಚಿತ್ರದಲ್ಲಿ "ಸಿಖ್ಖರ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಮತ್ತು ವಿಶೇಷವಾಗಿ ಅಕಾಲ್ ತಕ್ತ್‌ನ ಮಾಜಿ ಜಥೇದಾರ್ ಅವರನ್ನು "ಭಯೋತ್ಪಾದಕ" ಎಂದು ಬಿಂಬಿಸುವ ಮೂಲಕ ಸಮುದಾಯವನ್ನು "ಟಾರ್ಗೆಟ್" ಮಾಡಿದ್ದಾರೆ ಎಂದು ಬಸ್ಸಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
"ಆರೋಪಿಯು ಸರಿಯಾದ ಐತಿಹಾಸಿಕ ಸತ್ಯಗಳನ್ನು ಮತ್ತು ಅಂಕಿಅಂಶಗಳನ್ನು ಅಧ್ಯಯನ ಮಾಡದೆ ಸಿಖ್ಖರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ ಮತ್ತು ಸಿಖ್ ಸಮುದಾಯದ ವಿರುದ್ಧ ತಪ್ಪು ಮತ್ತು ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.