ಕಾಸರಗೋಡು: ಎರಡು ವರ್ಷ ಪ್ರಾಯದ ಮಗುವನ್ನು ಅಪಹರಿಸಿ ರೈಲಲ್ಲಿ ಕರೆದೊಯ್ಯುತ್ತಿದ್ದ ವ್ಯಕ್ತಿಯನ್ನು ಕಾಸರಗೋಡು ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಎರ್ನಾಕುಳಂ ಪರವೂರ್ ನಿವಾಸಿ ಅನೀಶ್ ಕುಮಾರ್ ಬಂಧಿತ.
ಮಂಗಳೂರಿನ ಪಡೀಲ್‍ನಲ್ಲಿ ವಾಸಿಸುತ್ತಿರುವ ಕಾರ್ಮಿಕ ದಂಪತಿಯ ಎರಡು ವರ್ಷದ ಹೆಣ್ಣುಮಗುವನ್ನು ಆರೋಪಿ ಅಪಹರಿಸಿ ಕೇರಳಕ್ಕೆ ರೈಲಲ್ಲಿ ಸಾಗಿಸುವ ಮಧ್ಯೆ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಮಿಕ ಕುಟುಂಬ ವಾಸಿಸುತ್ತಿದ್ದ ಜಾಗದಲ್ಲಿ ಆಟವಾಡುತ್ತಿದ್ದ ಬಾಲಕಿ ಶನಿವಾರ ಸಂಜೆ ದಿಢೀರ್ ನಾಪತ್ತೆಯಾಗಿದ್ದು, ಈ ಬಗ್ಗೆ ಬಾಲಕಿ ಹೆತ್ತವರು ಕಂಕನಾಡಿ ಠಾಣೆ ಪೊಲಿಸರಿಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲ ಪೊಲೀಸ್ ಠಾಣೆ ಹಾಗೂ ರೈಲ್ವೆ ನಿಲಾಣಗಳಿಗೆ ಮಾಹಿತಿ ನೀಡಿದ್ದರು. ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಾಲಕಿಯನ್ನು ಎತ್ತಿಕೊಂಡು ರೈಲನ್ನೇರುವ ದೃಶ್ಯ ಸಿಸಿ ಟಿವಿಯಲ್ಲಿ ಕಂಡುಬಂದ ಜಾಡುಹಿಡಿದು ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಗಾಂಧಿಧಾಮ್-ನಾಗರ್‍ಕೋಯಿಲ್ ಎಕ್ಸ್‍ಪ್ರೆಸ್ ರೈಲಲ್ಲಿ ಕಾಸರಗೋಡು ರಐಲ್ವೆ ಪೊಲೀಸರು ತಪಾಸಣೆ ನಡೆಸಿದಾಗ ಆರೋಪಿ ಬಾಲಕಿಯೊಂದಿಗೆ ಪತ್ತೆಯಾಗಿದ್ದನು. ನಂತರ ಆರೋಪಿ ಹಾಗೂ ಬಾಲಕಿಯನ್ನು ಕಂಕನಾಡಿ ಠಾಣೆ ಪೊಲೀಸರ ವಶಕ್ಕೊಪ್ಪಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.