ಬದಿಯಡ್ಕ: ಎಲ್‍ಐಸಿ ಗೋಲ್ಡನ್ ಜುಬಿಲಿ ಫೌಂಡೇಶನ್ ಸಾರ್ವಜನಿಕ ಉಪಯುಕ್ತತೆ ಅಡಿಯಲ್ಲಿ ಶಿಕ್ಷಣ, ಆರೋಗ್ಯ, ಬಡತನ ಮುಂತಾದ ವಲಯಗಳಲ್ಲಿ ನೀಡುವ ಕೊಡೆಗೆಯಾಗಿ ಬದಿಯಡ್ಕ ವಿದ್ಯಾಪೀಠ ಶಿಕ್ಷಣ ಸಂಸ್ಥೆಗೆ ಶಾಲಾ ಬಸ್ ಅನ್ನು ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.
ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್‍ಐಸಿ ಕೋಝಿಕೋಡ್ ಸೀನಿಯರ್ ಡಿವಿಷನ್ ಮೆನೇಜರ್ ಅಜೀಶ್ ಕೀಲಿಕೈನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಾಜಿ ಅಧ್ಯಕ್ಷ ಡಾ. ವೈ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಎಲ್‍ಐಸಿ ಕೋಝಿಕೋಡ್ ಹಿರಿಯ ವಿಭಾಗೀಯ ಪ್ರಬಂಧಕ ಅಜೀಶ್ ಮಾತನಾಡಿ, ಸಾರ್ವಜನಿಕ ಉಪಯುಕ್ತತೆಯಡಿಯಲ್ಲಿ ಜಗತ್ತಿಲ್ಲಯೇ ಬಲಿಷ್ಠ ಇನ್ಸೂರೆನ್ಸ್ ಬ್ರಾಂಡ್ ಆಗಿರುವ ಎಲ್‍ಐಸಿ ಸಮಾಜಕ್ಕೆ ಹಲವು ಕೊಡುಗೆಯನ್ನು ನೀಡುತ್ತಿದೆ. ಅಂತಹ ಒಂದು ಕೊಡುಗೆಯನ್ನು ಈ ಶಾಲೆಗೆ ನೀಡಲಾಗಿದೆ. ಈ ಶಾಲೆಗೆ ಅರ್ಹವಾಗಿಯೇ ಲಭಿಸಬೇಕಾದದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಡುಗೆಯನ್ನು ನೀಡುವುದಾಗಿ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಎಲ್‍ಐಸಿ ವಲಯ ಕ್ಲಬ್ ಸದಸ್ಯ ವೈ.ವಿ.ರಮೇಶ್ ಮಾತನಾಡಿದರು. ಎಲ್‍ಐಸಿ ಕಾಸರಗೋಡು ಶಾಖೆ ಹಿರಿಯ ಪ್ರಬಂಧಕ ವೇಣುಗೋಪಾಲ್, ಮುಳ್ಳೇರಿಯಾ ಎಸ್‍ಎಸ್‍ಒ ಪ್ರೇಮಾನಂದ, ಚೇರ್‍ಮೆನ್ಸ್ ಕ್ಲಬ್ ಮೆಂಬರ್ ರಾಘವೇಂದ್ರ ಅಮ್ಮಣ್ಣಾಯ, ವಿದ್ಯಾಪೀಠ ಶಾಲಾ ಪಿಟಿಎ ಅಧ್ಯಕ್ಷ ಅನಂತಕೃಷ್ಣ ಚಡಗ, ಶಾಲಾ ಪ್ರಬಂಧಕ ಜಯಪ್ರಕಾಶ್ ಪಜಿಲ, ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮಾ ಮತ್ತಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಾಪಕರು, ಹೆತ್ತವರು, ಎಲ್‍ಐಸಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಶಿಕ್ಷಕಿ ಸುಪ್ರೀತಾ ರೈ ಸ್ವಾಗತಿಸಿ, ರಾಜಗೋಪಾಲ ಚುಳ್ಳಿಕ್ಕಾನ ವಂದಿಸಿದರು. ರಶ್ಮಿ ಪೆರ್ಮುಖ ನಿರೂಪಿಸಿದರು.