ಕಾಸರಗೋಡು : ಕೇರಳ ಪ್ರದೇಶ ಶಾಲಾ ಶಿಕ್ಷಕರ ಸಂಘಟನೆ(ಕೆಪಿಎಸ್‍ಟಿಎ) ರಾಜ್ಯ ಪ್ರದೇಶ ವಿಶೇಷ ಮಹಿಳಾ ಸಮಾವೇಶ ಸೆ. 7ರಂದು ಉದುಮ ಐಶ್ವರ್ಯ ಸಭಾಂಗಣದಲ್ಲಿ ಜರುಗಲಿದ್ದು, ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ವಯನಾಡು, ಮಲಪ್ಪುರಂ ಜಿಲ್ಲೆಗಳ 500 ಮಹಿಳಾ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಪಿ.ಟಿ ಬೆನ್ನಿ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಶೇ.75ಕ್ಕೂ ಹೆಚ್ಚು ಶಿಕ್ಷಕರು ಮಹಿಳೆಯರಿರುವ ಪರಿಸ್ಥಿತಿಯಲ್ಲಿ ನಾಯಕತ್ವ ಮತ್ತು ಆಡಳಿತದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದು, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕೇರಳ ಪ್ರದೇಶ ಶಾಲಾ ಶಿಕ್ಷಕರ ಸಂಘ(ಕೆಪಿಎಸ್‍ಟಿಎ) ಜವಾಬ್ದಾರಿಯಾಗಿದೆ. ಮೊದಲ ಬಾರಿಗೆ, ಸಂಸ್ಥೆಯು ಸಾಂಸ್ಥಿಕ ಮತ್ತು ಸಾಮಾಜಿಕ-ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಸೃಜನಶೀಲ ನಾಯಕತ್ವಕ್ಕಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದೊಂದಿಗೆ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಶೈಕ್ಷಣಿಕ ಚರ್ಚೆ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಎಐಸಿಸಿ ಸದಸ್ಯೆ, ವಕೀಲೆ ಬಿಂದು ಕೃಷ್ಣ ಸಮಾವೇಶ ಉದ್ಘಾಟಿಸುವರು. ಈ ಸಂದರ್ಭ ಜಿಲ್ಲಾ ಸಾಂಸ್ಕøತಿಕ ವೇದಿಕೆ ಸಿದ್ಧಪಡಿಸಿರುವ 'ಸ್ಮೃತಿತರಂಗ್'ಎಂಬ ನೃತ್ಯ ಮತ್ತು ಸಂಗೀತ ಶಿಲ್ಪವನ್ನು 33 ಮಂದಿ ಮಹಿಳಾ ಶಿಕ್ಷಕರು ಪ್ರಸ್ತುತಪಡಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾಕೃಷ್ಣನ್, ಬ್ಲಾಕ್ ಸದಸ್ಯೆ ಪುಷ್ಪಾ ಶ್ರೀಧರನ್ ಮೊದಲದವರು ಪಾಲ್ಗೊಳ್ಳುವರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೇರಿ ವಿನೀತಾ ಥಾಮಸ್ ಮಹಿಳಾ ಸಬಲೀಕರಣ ಕುರಿತು ತರಗತಿ ನಡೆಸಿಕೊಡಲಿದ್ದಾರೆ. ರಾಜ್ಯ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಪಿ. ರಶೀದಾ, ಸಂಚಾಲಕಿ ಪಿ. ಚಂದ್ರಮತಿ, ಕೆ.ಪಿ.ಎಸ್.ಟಿ.ಎ. ರಾಜ್ಯ ಹಿರಿಯ ಉಪಾಧ್ಯಕ್ಷ ಟಿ.ಎ. ಶಾಹಿದಾ ರಹಮಾನ್, ರಾಜ್ಯ ಪದಾಧಿಕಾರಿಗಳಾದ ಎಂ.ಕೆ. ಅರುಣಾ, ಕೆ. ದೀಪಾ, ಸಿ.ಪಿ. ಸಂಧ್ಯಾ, ಸ್ವಪ್ನಾ ಜಾರ್ಜ್ ಮುಂತಾದವರು ಸಮವೇಶದಲ್ಲಿ ಪಾಲ್ಗೊಳ್ಳುವರು.
ಸಮಾರೋಪ ಸಮಾರಂಭದಲ್ಲಿ ಸಂಘಟನೆಯ ಸಮಕಾಲೀನ ಪ್ರಸ್ತುತತೆ ವಿಷಯ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಅರವಿಂದನ್ ತರಗತಿ ನಡೆಸಲಿದ್ದಾರೆ. ರಾಜ್ಯಾಧ್ಯಕ್ಷ ಕೆ. ಅಬ್ದುಲ್ ಮಜೀದ್ ಮುಖ್ಯ ಭಾಷಣ ಮಾಡುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ವಾಸುದೇವನ್ ನಂಬೂದಿರಿ, ಮಹಿಳಾ ವೇದಿಕೆ ರಾಜ್ಯ ಸಂಚಾಲಕಿ ಚಂದ್ರಮತಿ ಪಿ, ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಮಲ್ಲಿಕಾ ಪಿ. ವಿ, ಸಂಚಾಲಕಿ ಜಯಶ್ರೀ ಪಿ.ಟಿ, ರಾಜ್ಯ ಕೌನ್ಸಿಲರ್ ಸ್ವಪ್ನಾ ಜಾರ್ಜ್ ಉಪಸ್ಥಿತರಿದ್ದರು.