ಸಮಸ್ತಿಪುರ : ಬಿಹಾರದ ಸಮಸ್ತಿಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರವೆಸಗಲು ಯತ್ನಿಸಿದ ವೈದ್ಯ ಹಾಗೂ ಆತನ ಸಹೋದ್ಯೋಗಿಗಳಿಂದ ಪಾರಾಗಲು ನರ್ಸ್ ಒಬ್ಬರು ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಇರಿದಿದ್ದಾರೆ.
ಸಮಸ್ತಿಪುರ : ಬಿಹಾರದ ಸಮಸ್ತಿಪುರ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರವೆಸಗಲು ಯತ್ನಿಸಿದ ವೈದ್ಯ ಹಾಗೂ ಆತನ ಸಹೋದ್ಯೋಗಿಗಳಿಂದ ಪಾರಾಗಲು ನರ್ಸ್ ಒಬ್ಬರು ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಇರಿದಿದ್ದಾರೆ.
ಬುಧವಾರ ರಾತ್ರಿ ಮುಸರಿಘರಾರಿ ಪ್ರದೇಶದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ವೈದ್ಯ ಹಾಗೂ ಆತನ ಇಬ್ಬರು ಸಹೋದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.
'ವೈದ್ಯ ಹಾಗೂ ಆತನ ಇಬ್ಬರು ಸಹೋದ್ಯೋಗಿಗಳು ಬುಧವಾರ ತಡರಾತ್ರಿ ನರ್ಸ್ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದರು. ಮದ್ಯದ ಅಮಲಿನಲ್ಲಿದ್ದ ಈ ಮೂವರಿಂದ ತನ್ನನ್ನು ರಕ್ಷಿಸಿಕೊಳ್ಳಲು ನರ್ಸ್, ವೈದ್ಯನ ಮರ್ಮಾಂಗಕ್ಕೆ ಬ್ಲೇಡ್‌ನಿಂದ ಇರಿದಿದ್ದಾರೆ. ಬಳಿಕ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿ ಆಸ್ಪತ್ರೆಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ' ಎಂದು ನರ್ಸ್ ಹೇಳಿಕೆ ಉಲ್ಲೇಖಿಸಿ ಸಮಸ್ತಿಪುರದ ಇನ್‌ಸ್ಪೆಕ್ಟರ್ ಸಂಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ನರ್ಸ್ ಕರೆ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಗಾಯಗೊಂಡ ವೈದ್ಯನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ವೈದ್ಯ ಮತ್ತು ಆತನ ಸಹೋದ್ಯೋಗಿಗಳು ಸಿಸಿಟಿವಿ ಕ್ಯಾಮೆರಾಗಳನ್ನು ಸ್ವಿಚ್‌ಆಫ್ ಮಾಡಿದ್ದರು. ಜತೆಗೆ ಆಸ್ಪತ್ರೆ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದರು ಎಂದು ತಿಳಿದುಬಂದಿದೆ. ಆತ್ಮ ರಕ್ಷಣೆಗಾಗಿ ನರ್ಸ್ ಬಳಸಿದ ಬ್ಲೇಡ್ ಮತ್ತು ಮದ್ಯದ ಬಾಟಲಿಯನ್ನು ಘಟನಾ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ ಎಂದು ಇನ್‌ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.