ಕಾಸರಗೋಡು: ಆಲಪ್ಪುಳದಲ್ಲಿ ವೃದ್ಧೆಯನ್ನು ಕೊಲೆಗೈದು ಹೂತುಹಾಕಿದ ಪ್ರಕರಣದ ಆರೋಪಿಗಳೆಂದು ಸಂಶಯಿಸಲಾಗಿರುವ ಉಡುಪಿಯ ಮಹಿಳೆ ಹಾಗೂ ಈಕೆಯ ಪತಿಗಾಗಿ ಪೊಲೀಸರು ಕಾಸರಗೋಡಿನಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಎರ್ನಾಕುಳಂ ಸೌತ್ ರೈಲ್ವೆ ನಿಲ್ದಾಣ ಸನಿಹದ ಕರಿತ್ತಲ ರಸ್ತೆ ಶಿವಕೃಪಾದ ಸುಭದ್ರಾ(78)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಿವಾಸಿ ಮಹಿಳೆ ಶರ್ಮಿಳಾ ಹಾಗೂ ಈಕೆ ಪತಿ ಮ್ಯಾಥ್ಯೂಸ್ ಯಾನೆ ನಿತಿನ್ ಎಂಬವರಿಗಾಗಿ ಶೋಧ ಮುಂದುವರಿಸಲಾಗಿದೆ. ಇಬ್ಬರೂ ಆರೋಪಿಗಳು ಕೊಲೆ ಪ್ರಕರಣದ ನಂತರ ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದು,ಅಲ್ಲಿಂದ ಕಾಸರಗೋಡಿಗೆ ತಲುಪಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಕಾಸರಗೋಡಿಗೆ ತನಿಖೆ ವಿಸ್ತರಿಸಿದ್ದಾರೆ.
ಕರಿತ್ತಲ ರಸ್ತೆಯ 'ಶಿವಕೃಪಾ'ದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಸುಭದ್ರಾ ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ಇವರ ಪುತ್ರ ರಾಧಾಕೃಷ್ಣನ್ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಈ ಮಧ್ಯೆ ಎರ್ನಾಕುಳಂ ಕವಲೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಉಡುಪಿ ನಿವಾಸಿ ಶರ್ಮಿಳಾ ಹಾಗೂ ಈಕೆ ಪತಿ ಮ್ಯಾಥ್ಯೂಸ್ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿತ್ತು. ಸುಭದ್ರಾ ಅವರನ್ನು ಕೊಲೆಗೈದು ಚಿನ್ನಾಭರಣ ದೋಚಿ ದಂಪತಿ ಪರಾರಿಯಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಪೊಲೀಸರು ನಡೆಸಿದ ತನಿಖೆಯಿಂದ ಸುಭದ್ರಾ ಕಡಲೂರಿಗೆ ಆಗಮಿಸಿದ್ದ ಸಂದರ್ಭ ಈಕೆ ಜತೆ ಮಹಿಳೆಯೊಬ್ಬಳಿದ್ದು, ಈ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನು ತಪಾಸಣೆ ನಡೆಸಿದಾಗ ಜತೆಗಿದ್ದ ಮಹಿಳೆ ಶರ್ಮಿಳಾ ಎಂದು ಖಚಿತಗೊಂಡಿತ್ತು. ಈ ಮಧ್ಯೆ ಸುಭದ್ರಾ ಅವರ ಮೃತದೇಹ ಮನೆ ಸನಿಹ ಹಿತ್ತಿಲಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹ ಗುರುತು ಪತ್ತೆಹಚ್ಚಿದ ರಾಧಾಕೃಷ್ಣನ್ ಅವರು ತಾಯಿ ಶರೀರದಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಂಗಳೂರಲ್ಲಿ ಚಿನ್ನ ಮಾರಾಟ?:
ಸುಭದ್ರ ಅವರ ಕೊಲೆಗೈದು, ಮೈಮೇಲಿದ್ದ ಚಿನ್ನಾಭರಣ ದೋಚಿದ ನಂತರ ಈ ಚಿನ್ನವನ್ನು ಮಂಗಳೂರಿನಲ್ಲಿ ಅಡವಿರಿಸಲಾಗಿದೆ. ಅಲ್ಲಿಂದ ದಂಪತಿ ಕಾಸರಗೋಡಿಗೆ ತೆರಳಿರುವ ಬಗ್ಗೆ ತನಿಖಾ ತಂಡ ಸಂಶಯ ವ್ಯಕ್ತಪಡಿಸಿದೆ. ಶರ್ಮಿಳಾಗೆ ಸುಭದ್ರಾ ಜತೆ ಹಣಕಾಸಿನ ವ್ಯವಹಾರವೂ ಇತ್ತೆನ್ನಲಾಗಿದೆ.