ನವದೆಹಲಿ: ಅಮೆರಿಕದ ಅಧ್ಯಕ್ಷರು ಬಳಸುವ ಕಾರಿನ ಗಾತ್ರವು ತಮ್ಮ ತಾಯಿಯ ಮನೆಯಷ್ಟೇ ದೊಡ್ಡದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬರಾಕ್ ಒಬಾಮ ಅವರಿಗೆ 2014ರಲ್ಲಿ ಹೇಳಿದ್ದರು! ಮೋದಿ ಅವರ ಈ ಮಾತು, ಮೋದಿ ಮತ್ತು ಒಬಾಮ ಅವರ ನಡುವೆ ಉತ್ತಮ ಸಂಬಂಧ ಮೂಡುವಂತೆ ಮಾಡಿತ್ತು.
ಈ ಸಂಗತಿಯನ್ನು ತಿಳಿಸಿದವರು ಅಮೆರಿಕದಲ್ಲಿನ ಭಾರತದ ರಾಯಭಾರಿ ಆಗಿದ್ದ ವಿನಯ್ ಕ್ವಾತ್ರಾ. ಮೋದಿ ಹಾಗೂ ಒಬಾಮ ಅವರು ಶ್ರೀಮಂತ ಕುಟುಂಬದ ಹಿನ್ನೆಲೆಯನ್ನೇನೂ ಹೊಂದಿದವರಲ್ಲ.
ಪ್ರಧಾನಿ ಮೋದಿ ಅವರ ಬದುಕಿಗೆ ಸಂಬಂಧಿಸಿದ ವೃತ್ತಾಂತಗಳನ್ನು ದಾಖಲಿಸುತ್ತ ಬಂದಿರುವ 'ಮೋದಿ ಸ್ಟೋರಿ' ಸಾಮಾಜಿಕ ಜಾಲತಾಣ ಖಾತೆಗೆ ಈ ಸಂಗತಿಯನ್ನು ಕ್ವಾತ್ರಾ ಅವರು ತಿಳಿಸಿದ್ದಾರೆ. ಅಧಿಕೃತ ಮಾತುಕತೆಗಳ ನಂತರ ಮೋದಿ ಮತ್ತು ಒಬಾಮ ಅವರು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸ್ಮಾರಕ ಇರುವಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಹೃದಯಸ್ಪರ್ಶಿಯಾದ ಈ ಮಾತುಕತೆ ನಡೆಯಿತು ಎಂದು ಕ್ವಾತ್ರಾ ಹೇಳಿದ್ದಾರೆ.
ಒಬಾಮ ಅವರ ಲೈಮಾಸಿನ್ ಕಾರಿನಲ್ಲಿ ಇಬ್ಬರೂ ನಾಯಕರು 10-12 ನಿಮಿಷ ಪ್ರಯಾಣಿಸಿದ್ದರು. ಪ್ರಯಾಣದ ಸಂದರ್ಭದಲ್ಲಿ ಇಬ್ಬರ ಮಾತುಕತೆಯು ಕುಟುಂಬದ ಕಡೆ ಹೊರಳಿತು. ಒಬಾಮ ಅವರು ಸ್ನೇಹಪೂರ್ವಕವಾಗಿ, ಮೋದಿ ಅವರ ತಾಯಿಯ ಬಗ್ಗೆ ವಿಚಾರಿಸಿದರು ಎಂದ ಕ್ವಾತ್ರಾ ನೆನಪಿಸಿಕೊಂಡಿದ್ದಾರೆ.
ಒಬಾಮ ಮಾತಿಗೆ ಮುಗುಳ್ನಕ್ಕ ಪ್ರಧಾನಿ ಮೋದಿ, ಮುಚ್ಚುಮರೆ ಇಲ್ಲದೆ ಬಹಳ ಅನಿರೀಕ್ಷಿತವಾದ ಉತ್ತರ ನೀಡಿದರು. 'ಅಧ್ಯಕ್ಷ ಒಬಾಮ ಅವರೇ, ನೀವು ಇದನ್ನು ನಂಬಲಿಕ್ಕಿಲ್ಲ. ನಿಮ್ಮ ಕಾರಿನ ಗಾತ್ರವು ನನ್ನ ಅಮ್ಮ ವಾಸಿಸುತ್ತಿರುವ ಮನೆಗೆ ಸರಿಸುಮಾರಾಗಿ ಇದೆ ಎಂದಿದ್ದರು' ಎಂದು ಕ್ವಾತ್ರಾ ಹೇಳಿದ್ದಾರೆ. ಅವರಿಬ್ಬರ ನಡುವೆ ಈ ಮಾತುಕತೆ ನಡೆದಾಗ, ಕ್ವಾತ್ರಾ ಅವರು ಅನುವಾದಕರಾಗಿ ಜೊತೆಗಿದ್ದರು.
ಮೋದಿ ಅವರ ಮಾತು ಅಮೆರಿಕದ ಅಧ್ಯಕ್ಷರಿಗೆ ಆಶ್ಚರ್ಯ ತರಿಸಿತು. ಮೋದಿ ಅವರು ಮುಚ್ಚುಮರೆ ಇಲ್ಲದೆ ಆಡಿದ ಮಾತುಗಳು, ಒಬಾಮ ಅವರಿಗೆ ಮೋದಿ ಅವರ ಹಿನ್ನೆಲೆಯ ಕುರಿತು ಒಂದಿಷ್ಟು ಮಾಹಿತಿ ನೀಡಿದವು. ಅಲ್ಲದೆ, ಅವರ ನೇರವಂತಿಕೆಯನ್ನು ಕೂಡ ತೋರಿಸಿಕೊಟ್ಟವು.
ಇಬ್ಬರೂ ನಾಯಕರು ಬಹಳ ಸಾಮಾನ್ಯ ಕುಟುಂಬದ ಹಿನ್ನೆಲೆ ಹೊಂದಿದ್ದ ಕಾರಣಕ್ಕೆ, ಈ ಮಾತುಕತೆಯು ಅವರಿಬ್ಬರ ನಡುವೆ ಗಾಢವಾದ ಸಂಬಂಧ ಏರ್ಪಡುವುದಕ್ಕೆ ದಾರಿ ಮಾಡಿಕೊಟ್ಟಿತು ಎಂದು ಕ್ವಾತ್ರಾ ನೆನಪಿಸಿಕೊಂಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಅವರ ಮೊದಲ ಅಮೆರಿಕ ಭೇಟಿ ಅದಾಗಿತ್ತು.
ಮೋದಿ ಅವರು ಅಮೆರಿಕದ ಅಧ್ಯಕ್ಷರು ಸೇರಿದಂತೆ ವಿಶ್ವದ ನಾಯಕರ ಜೊತೆ ಆಪ್ತವಾಗಿ ಬೆರೆಯುತ್ತಾರೆ, ಸಾಂಸ್ಕೃತಿಕ ಹಾಗೂ ಭೌಗೋಳಿಕ ವ್ಯತ್ಯಾಸವನ್ನು ಮೀರಲು ಅವರು ತಮ್ಮ ಜೀವನದ ಅನುಭವಗಳನ್ನು ಬಳಸಿಕೊಳ್ಳುತ್ತಾರೆ ಎಂದು ಕ್ವಾತ್ರಾ ಹೇಳಿದ್ದಾರೆ.