ಕೊಚ್ಚಿ: ತಿರುವನಂತಪುರಂನ ಮ್ಯಾಸ್ಕಾಟ್ ಹೋಟೆಲ್‍ನಲ್ಲಿ ನಟಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಆರೋಪಿ ನಟ, ಅಮ್ಮಾ ಮಾಜಿ ಪ್ರಧಾನ ಕಾರ್ಯದರ್ಶಿ ಸಿದ್ದಿಕ್‍ನನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಪೋಲೀಸರು ತೀವ್ರ ಪ್ರಯತ್ನ ನಡೆಸಿದ್ದಾರೆ.
ತಿರುವನಂತಪುರದ ತನಿಖಾ ತಂಡ ಕೊಚ್ಚಿಯಲ್ಲಿ ತನಿಖೆ ಮುಂದುವರಿಸಿದೆ. ವಿಶೇಷ ತಂಡಗಳು ಕೊಚ್ಚಿ ಮತ್ತು ಆಲುವಾದಲ್ಲಿಯೂ ತನಿಖೆ ನಡೆಸುತ್ತಿವೆ.
ಪೋಲೀಸರು ಸಿದ್ದಿಕ್‍ನ ಎರ್ನಾಕುಳಂನಲ್ಲಿರುವ ಎರಡು ಮನೆಗಳು, ಹೋಟೆಲ್‍ಗಳು ಮತ್ತು ಅವರು ಹೋಗಬಹುದಾದ ಇತರ ಸ್ಥಳಗಳಲ್ಲಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕøತಗೊಂಡ ನಂತರ ಅವರು ತಮ್ಮ ಪೋನ್ ಸ್ವಿಚ್ ಆಫ್ ಮಾಡಿರುವರು. ಪೊಲೀಸರು ಸಿನಿಮಾ ಸ್ನೇಹಿತರ ಪೋನ್ ನಂಬರ್‍ಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಈ ತಂಡ ಕೇರಳದ ಹೊರಗೆ ಕೂಡ ತನಿಖೆ ನಡೆಸಲಿದೆ.
ಏತನ್ಮಧ್ಯೆ, ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಸಿದ್ದಿಕ್ ಇಂದು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಸಂಬಂಧಿಸಿದಂತೆ ಕೇರಳದಲ್ಲಿರುವ ಸಿದ್ದಿಕ್ ಪರ ವಕೀಲರು ದೆಹಲಿಯಲ್ಲಿ ಹಿರಿಯ ವಕೀಲರ ಜತೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ತೀರ್ಪಿನ ಪ್ರತಿಯನ್ನು ರವಾನಿಸಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಶರಣಾಗತಿಯ ಬಗ್ಗೆಯೂ ನಿರ್ಧಾರ ಕೈಗೊಳ್ಳಲು ಅವಕಾಶವಿದೆ.
ಏತನ್ಮಧ್ಯೆ, ಸಿದ್ದಿಕ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರೆ, ತಮ್ಮ ಪರ ಕೇಳದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿ ತಡೆಯಾಜ್ಞೆಯೊಂದಿಗೆ ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗುವುದಾಗಿ ಸಂತ್ರಸ್ಥೆ ಹೇಳಿದ್ದಾರೆ.