ಛತರ್‌ಪುರ: ಮರಳು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ವ್ಯಕ್ತಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಲಾಗಿದ್ದ ವಸ್ತುಗಳನ್ನು ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಛತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
'ಅರಣ್ಯ ವ್ಯಾಪ್ತಿಯಲ್ಲಿರುವ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಮೇಲೆ ಶನಿವಾರ ದಾಳಿ ನಡೆಸಿ, ಎರಡು ಟ್ರ್ಯಾಕ್ಟರ್ ಟ್ರಾಲಿಗಳನ್ನು ಜಪ್ತಿ ಮಾಡಲಾಗಿತ್ತು.
ಈ ವೇಳೆ ಶೈಲೇಂದ್ರ ಸಿಂಗ್ ಎಂಬಾತ ಅಧಿಕಾರಿಗಳ ಮೇಲೆ ಟ್ರ್ಯಾಕ್ಟರ್ ಟ್ರಾಲಿ ಹರಿಸಲು ಯತ್ನಿಸಿದ್ದಾನೆ' ಎಂದು ಅರಣ್ಯಾಧಿಕಾರಿ ರಾಜೇಂದ್ರ ಪಸ್ತಾರ್ ಅವರು ಭಾನುವಾರ ತಿಳಿಸಿದ್ದಾರೆ.
'ಅರಣ್ಯ ಇಲಾಖೆಯ ವಾಹನಕ್ಕೂ ಹಾನಿಯಾಗಿದ್ದು, ಆರೋಪಿಗಳು ತಮ್ಮ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.