ಕಾಸರಗೋಡು: ಕಾರವಾರದ ಹೊಳೆಯಲ್ಲಿ ನೀರುಪಾಲಾಗಿದ್ದ ಲಾರಿ ಚಾಲಕ ಅರ್ಜುನ್ ಅವರನ್ನು ಜೀವಂತವಾಗಿ ಮೇಲಕ್ಕೆತ್ತಿ ಕರೆತರುವ ಪ್ರಯತ್ನ ವಿಫಲವಾಗಿರುವ ಬಗ್ಗೆ ಅತೀವ ದು:ಖವುಂಟಾಗಿರುವುದಾಗಿ ಕಾರವಾರ ಶಾಸಕ ಸತೀಶ್‍ಕೃಷ್ಣ ಸೈಲ್ ತಿಳಿಸಿದ್ದಾರೆ. ಅರ್ಜುನ್ ಮೃತದೇಹ ಕೋಯಿಕ್ಕೋಡಿನ ಕಣ್ಣಾಡಿಕಲ್‍ನ ತವರಿಗೆ ತಲುಪಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಅರ್ಜುನ್ ಪತ್ತೆ ಬಗ್ಗೆ ನಡೆಸಿದ ಕಾರ್ಯಾಚರಣೆ ನನ್ನ ಜೀವನದಲ್ಲಿ ಕಂಡ ಅತಿದೊಡ್ಡ ದೌತ್ಯವಾಗಿದೆ. ಕಳೆದ 72ದಿವಸಗಳಲ್ಲಿ ಅರ್ಜುನ್‍ನನ್ನು ಜೀವಂತವಾಗಿ ಪತ್ತೆಹಚ್ಚುವ ಕೆಲಸವನ್ನು ನಡೆಸಲಾಗಿದ್ದರೂ, ಕೊನೆಗೂ ಮೃತದೇಹ ಪತ್ತೆಹಚ್ಚಬೇಕಾಗಿ ಬಂದಿರುವುದು ದುರ್ವಿಧಿ. ಮೃತದೇಹವಾದರೂ ಲಭಿಸಿರುವುದು ಒಂದಷ್ಟು ನೆಮ್ಮದಿ ತಂದುಕೊಟ್ಟಿದೆ. ಕಾರ್ಯಾಚರಣೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಕೇರಳದ ಮಾಧ್ಯಮದವರ ನಿರಂತರ ಶ್ರಮ ಶ್ಲಾಘನೀಯ ಎಂದು ತಿಳಿಸಿದರು. ಕಾರ್ಯಾಚರಣೆಗೆ ಡ್ರಜ್ಜರ್ ಪೂರೈಕೆ ಸೇರಿದಂತೆ ಕಳೆದ ಹಲವು ದಿವಸಗಳಿಂದ ಸ್ಥಳದಲ್ಲೇ ಬೀಡುಬಿಟ್ಟಿದ್ದ ಶಾಸಕ ಸತೀಶ್‍ಕೃಷ್ಣ ಸೈಲ್ ಅವರು ಮೃತದೇಹದೊಂದಿಗೆ ಅರ್ಜುನ್ ಮನೆಗೆ ತಲುಪಿದಾಗ, ಇವರ ಗುರುತು ಪತ್ತೆಹಚ್ಚಿದ ನೆರೆದಿದ್ದವರಲ್ಲಿ ಕೆಲವರು ಇವರನ್ನು ಆತ್ಮೀಯವಾಗಿ ಮಾತನಾಡಿಸಿದರು. ಕೆಲವರು ಅವರೊಂದಿಗೆ ಸೆಲ್ಫೀ ತೆಗೆಸಿಕೊಂಡರೆ, ಅರ್ಜುನ್ ಮನೆಯವರು ಹಾಗೂ ಸಂಬಂಧಿಕರು ತಮಗೆ ಆಭಾರಿಗಳಾಗಿರುವುದಾಗಿ ತಿಳಿಸಿ ಮೃತದೇಹ ಪತ್ತೆಹಚ್ಚುವಲ್ಲಿ ಸತೀಶ್ ಸೈಲ್ ಅವರ ಶ್ರಮವನ್ನು ಶ್ಲಾಘಿಸಿದರು. ಕೆಲವರು ಸತೀಶ್ ಅವರ ಕಾಲು ಮುಟ್ಟಿ ನಮಸ್ಕರಿಸಿದರೆ, ಇನ್ನು ಕೆಲವರು ತಮಗೆ ತಿಳಿದ ಭಾಷೆಗಳಲ್ಲಿ ಸೈಲ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರೂ ಕಾರವಾರದ ಶಿರೂರಿನಲ್ಲಿದ್ದುಕೊಂಡು ಕಾರ್ಯಾಚರಣೆ ಬಗ್ಗೆ ಮೇಲ್ನೋಟ ವಹಿಸುತ್ತಿದ್ದರು. ಇಬ್ಬರೂ ಶಾಸಕರು ಅರ್ಜುನ್ ಮೃತದೇಹ ಮನೆ ವರೆಗೆ ತಲುಪಿಸಿ ವಾಪಸಾಗಿದ್ದಾರೆ.