ಸಿಂಗಪುರ: 'ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಂಗಪುರದೊಂದಿಗೆ ಭಾವನಾತ್ಮಕ ಸಂಬಂಧ ಇದೆ. ಈ ಕಾರಣಕ್ಕಾಗಿಯೇ ಪ್ರಧಾನಿಯಾಗಿ ಮೂರನೇ ಅವಧಿಗೆ ಆಯ್ಕೆಯಾದ ಆರಂಭದಲ್ಲಿಯೇ ಅವರು ಸಿಂಗಪುರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ' ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ 'ದಿ ಸ್ಟ್ರೇಟ್ಸ್ ಟೈಮ್ಸ್' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
'ಮೋದಿ ಅವರು ಬುಧವಾರ ಸಿಂಗಪುರಕ್ಕೆ ಭೇಟಿ ನೀಡಲಿದ್ದಾರೆ. ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕಾಲ ಕೂಡಿ ಬಂದಿದೆ. ಎರಡು ದಶಕಗಳಿಂದ ನಮ್ಮ ಸಂಬಂಧ ಬಹಳಷ್ಟು ಶಕ್ತಿಯುತವಾಗಿದೆ' ಎಂದು ಅಭಿಪ್ರಾಯಪಟ್ಟರು.
'ಕಳೆದ ದಶಕದಲ್ಲಿ ಭಾರತ ಸಾಧಿಸಿದ ಅಭಿವೃದ್ಧಿ, ಕೋವಿಡ್ ಸಂಕಷ್ಟದಿಂದ ದೇಶವು ಹೊರಬಂದ ರೀತಿ, ದೇಶದಲ್ಲಿ ತ್ವರಿತ ಗತಿಯಲ್ಲಿ ನಡೆಯುತ್ತಿರುವ ಡಿಜಿಟಲ್ ಕ್ರಾಂತಿ, ನಮ್ಮಲ್ಲಿನ ಮೂಲಸೌಕರ್ಯ, ಉತ್ಪಾದಕ ವಲಯ ಹಾಗೂ ಯುವಜನರಲ್ಲಿನ ಹೇರಳ ಪ್ರತಿಭೆ... ಹೀಗೆ, ಸಿಂಗಪುರವು ಹಲವು ಅಂಶಗಳನ್ನು ಗಮನಿಸಬಹುದು. ಈ ಎಲ್ಲ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಕೈಜೋಡಿಸಬಹುದು' ಎಂದರು.
'ಸೆಮಿಕಂಡಕ್ಟರ್, ಹಸಿರು ತಾಂತ್ರಿಕತೆ, ವಿದ್ಯುತ್ ಚಾಲಿತ ವಾಹನಗಳು ದ್ವಿಪಕ್ಷೀಯ ಮಾತುಕತೆ ಆದ್ಯತಾ ವಿಷಯಗಳಾಗಿವೆ. ಸಂಪರ್ಕ ಹಾಗೂ ಇಂಧನ ವಿನಿಮಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ' ಎಂದರು.