ಕೊಲಂಬೊ: ಶ್ರೀಲಂಕಾದ ನೂತನ ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಶ್ರೀಲಂಕಾದದಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆ ಎನಿಸಿಕೊಂಡರು.
ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಪಕ್ಷದ 54 ವರ್ಷದ ಹರಿಣಿಯವರಿಗೆ ಅಧ್ಯಕ್ಷ ಅನುರಾ ಕುಮಾರ್ ದಿಸ್ಸನಾಯಕೆಯವರು ಪ್ರಮಾಣ ವಚನ ಬೋಧಿಸಿದರು.
ದಿಸ್ಸನಾಯಕೆಯವರೇ ಹರಿಣಿಯವರನ್ನು ಪ್ರಧಾನಿಯನ್ನಾಗಿ ನೇಮಕಗೊಳಿಸಿದರು. ಅವರೂ ಸೇರಿ ಒಟ್ಟು ನಾಲ್ಕು ಮಂದಿಯನ್ನು ಸಚಿವರನ್ನಾಗಿಯೂ ನೇಮಕ ಮಾಡಿದ್ದಾರೆ.
ಹರಿಣಿಯವರಿಗೆ ನ್ಯಾಯ, ಶಿಕ್ಷಣ, ಕಾರ್ಮಿಕ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಹಾಗೂ ಬಂಡವಾಳ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
ಅಧ್ಯಕ್ಷೀಯ ಚುನಾವಣೆಯ ಬಳಿಕ ಪ್ರಧಾನಿ ಹುದ್ದೆಗೆ ದಿನೇಶ್ ಗುಣವರ್ಧನ ಅವರು ರಾಜೀನಾಮೆ ನೀಡಿದ್ದರು. ಅವರ ಸ್ಥಾನವನ್ನು ಹರಿಣಿ ತುಂಬಲಿದ್ದಾರೆ.
ಹಕ್ಕುಗಳ ಕಾರ್ಯಕರ್ತೆ ಹಾಗೂ ಪ್ರಧ್ಯಾಪಕಿಯಾಗಿರುವ ಹರಿಣಿ ಅಮರಸೂರ್ಯ ಅವರಿಗಿಂತ ಮೊದಲು ಮಹಿಳಾ ಪ್ರಧಾನಿಯಾಗಿದ್ದವರು ಸಿರಿಮಾವೊ ಬಂಡಾರಾನಾಯಿಕೆ.
ಎನ್‌ಪಿಪಿ ಸಂಸದರಾದ ವಿಜೇತ ಹೆರತ್ ಹಾಗೂ ಲಕ್ಷ್ಮಣ ನಿಪುಣರಚ್ಚಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುಂದಿನ ಸಂಸತ್ ಚುನಾವಣೆ ನಡೆಯುವವರೆಗೆ ಅವರು ಹಂಗಾಮಿ ಸಚಿವರಾಗಿರಲಿದ್ದಾರೆ.
ನವೆಂಬರ್‌ನಲ್ಲಿ ಸಂಸತ್ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.