ನವದೆಹಲಿ: ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಸಮೂಹಗಳ ರಾಜಧಾನಿ ಪೋರ್ಟ್ ಬ್ಲೇರ್ ಅನ್ನು 'ಶ್ರೀ ವಿಜಯಪುರಂ' ಎಂದು ಮರುನಾಮಕರಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.
'ವಸಾಹತುಶಾಹಿ ಗುರುತುಗಳಿಂದ ದೇಶವನ್ನು ಮುಕ್ತಗೊಳಿಸಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ, ಪ್ಲೋರ್ಟ್ ಬ್ಲೇರ್ ಅನ್ನು ಶ್ರೀ ವಿಜಯಪುರಂ ಎಂದು ಮರುನಾಮಕರಣ ಮಾಡಲು ನಾವು ಇಂದು ನಿರ್ಧರಿಸಿದ್ದೇವೆ' ಎಂದು ಅವರು ಬರೆದುಕೊಂಡಿದ್ದಾರೆ.
'ಹಿಂದಿನ ಹೆಸರು ವಸಾಹತುಶಾಹಿ ಪರಂಪರೆಯ ಗುರುತಾಗಿತ್ತು. ಶ್ರೀ ವಿಜಯಪುರಂ ಸ್ವಾತಂತ್ರ್ಯ ಹೋರಾಟದಲ್ಲಿ ಪಡೆದ ವಿಜಯದ ಹಾಗೂ ಸ್ವಾತಂತ್ರ್ಯ ಸಂಘರ್ಷದಲ್ಲಿ ಅಂಡಮಾನ್ ಹಾಗೂ ನಿಕೋಬಾರ್‌ನ ವಿಶಿಷ್ಟ ಪಾತ್ರದ ಸಂಕೇತ. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಇತಿಹಾಸದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅಪ್ರತಿಮ ಸ್ಥಾನ ಪಡೆದಿವೆ' ಎಂದು ಅವರು ಹೇಳಿದ್ದಾರೆ.
'ಒಂದು ಕಾಲದಲ್ಲಿ ಚೋಳ ಸಾಮ್ರಾಜ್ಯದ ನೌಕಾನೆಲೆಯಾಗಿದ್ದ ಈ ದ್ವೀಪವು, ನಮ್ಮ ಕಾರ್ಯತಂತ್ರ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳಿಗೆ ನಿರ್ಣಾಯಕ ನೆಲೆಯಾಗಿದೆ. ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಮೊದಲ ಬಾರಿಗೆ ತಿರಂಗಾ ಹಾರಿಸಿದ ಸ್ಥಳ. ವೀರ ಸಾವರ್ಕರ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡಿದ ಸೆಲ್ಯುಲಾರ್ ಜೈಲು ಕೂಡ ಇಲ್ಲೇ ಇದೆ' ಎಂದು ಬರೆದುಕೊಂಡಿದ್ದಾರೆ.
ಬ್ರಿಟಿಷ್ ಭಾರತದಲ್ಲಿ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ನೌಕಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ಅರ್ಚಿಬಾಲ್ಡ್ ಬ್ಲೇರ್ ಹೆಸರನ್ನು ನಗರಕ್ಕೆ ಇಡಲಾಗಿತ್ತು.