ಕಾಸರಗೋಡು: ಕಾಞಂಗಾಡು ಸನಿಹ ಕಳ್ಳಾರಿನಲ್ಲಿ ವಿವಾಹ ಸಮಾರಂಭವೊಂದಲ್ಲಿ ಪಾಲ್ಗೊಂಡು ವಾಪಸಾಗಲು ರೈಲ್ವೆ ನಿಲ್ದಾಣಕ್ಕೆ ತಲುಪಿದ್ದ ವಧುವಿನ ತಾಯಿಯ ತಾಯಿ ಸೇರಿದಂತೆ ಮೂವರು ಮಹಿಳೆಯರು ರೈಲು ಡಿಕ್ಕಿಯಾಗಿ ದಾರುಣವಾಗಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಕಾಞಂಗಾಡು ರೈಲ್ವೆ ನಿಲ್ದಾಣದಲ್ಲಿ ದುರಂತ ನಡೆದಿದೆ.
ಕೋಟ್ಟಾಯಂ ಪಾಲಕ್ಕುಡಿಯಿಲ್ ಚಿಂಗಾವನಂ ನಿವಾಸಿ, ವಧುವಿನ ಅಜ್ಜಿ ಚಿನ್ನಮ್ಮ(68), ಪರಪ್ಪತ್ತುರ ಈರಾ ನಿವಾಸಿ ಆಲಿಸ್ ಥಾಮಸ್(61)ಹಾಗೂ ಚಿಂಗಾವನಂ ಪರುತ್ತುಂಪಾರ ನಿವಾಸಿ ಏಂಜಲಿನಾ(30)ಮೃತಪಟ್ಟ ಮಹಿಳೆಯರು.
ಶನಿವಾರ ಬೆಳಗ್ಗೆ ತಿರುವನಂತಪುರದಿಂದ ಆಗಮಿಸಿದ ಮಲಬಾರ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಆಗಮಿಸಿದ್ದ ಇವರು, ಕಾಞಂಗಾಡು ಸನಿಹದ ಕಳ್ಳಾರು ಸೈಂಟ್ ಥಾಮಸ್ ಇಗರ್ಜಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು, ಅದೇ ದಿನ ರಾತ್ರಿ ಮಲಬಾರ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಕೋಟ್ಟಾಯಂಗೆ ವಾಪಸಾಗಲು ಕಾಞಂಗಾಡು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು.
ಒಂದನೇ ಪ್ಲ್ಯಾಟ್ ಫಾರ್ಮ್‍ಗೆ ಆಗಮಿಸಿದ್ದ ಇವರು, ನಂತರ ಎರಡನೇ ಪ್ಲ್ಯಾಟ್‍ಫಾರ್ಮ್‍ಗೆ ತೆರಳಿದ್ದಾರೆ. ಆದರೆ ರೈಲು ಒಂದನೇ ಪ್ಲ್ಯಾಟ್‍ಫಾರ್ಮ್‍ಗೆ ಬರುವುದಾಗಿ ಸಹಪ್ರಯಾಣಿಕರು ತಿಳಿಸುತ್ತಿದ್ದಂತೆ ಮೂರೂ ಮಂದಿ ಅದೇ ಹಾದಿಯಲ್ಲಿ ಟ್ರ್ಯಾಕ್ ದಾಟಿ ಸಂಚರಿಸುವ ಮಧ್ಯೆ ಕಣ್ಣೂರು ಭಾಗದಿಂದ ಆಗಮಿಸಿದ ಕೊಯಂಬತ್ತೂರ್-ಹಿಸ್ಸಾರ್ ಎಕ್ಸ್‍ಪ್ರೆಸ್ ರೈಲು ಡಿಕ್ಕಿಯಾಗಿ ಮೂರೂ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತದೇಹ ಜಿಲ್ಲಾಸ್ಪತ್ರೆಯಲ್ಲಿ ಮಹಜರು ನಡೆಸಿದ ನಂತರ ರಾತ್ರಿಯೇ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ದುರಂತದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ರೈಲುಗಳನ್ನು ಅರ್ಧ ತಾಸಿಗೂ ಹೆಚ್ಚುಕಾಲ ತಡೆಹಿಡಿಯಲಾಗಿತ್ತು. ದುರಂತದಲ್ಲಿ ಮಡಿದವರ ಸಹಿತ ಹಲವು ಮಂದಿ ರಾತ್ರಿ ಮಲಬಾರ್ ಎಕ್ಸ್‍ಪ್ರೆಸ್ ರೈಲಿಗೆ ಟಿಕೆಟ್ ಕಾಯ್ದಿರಿಸಿದ್ದರು. ಅಪಘಾತದ ಹಿನ್ನೆಲೆಯಲ್ಲಿ ಅರ್ಧ ತಾಸಿಗೂ ಹೆಚ್ಚುಕಾಲ ನಿಲ್ದಾಣದಲ್ಲಿ ರೈಲು ತಡೆ ಹಿಡಿಯಲಾಗಿದ್ದು, 8.30ಕ್ಕೆ ರೈಲು ಪ್ರಯಾಣ ಮುಂದುವರಿಸಿತ್ತು. ಮದುವೆಗೆ ಆಗಮಿಸಿದವರು ಇದೇ ರೈಲಲ್ಲಿ ಕೋಟ್ಟಾಯಂಗೆ ಪ್ರಯಾಣ ಮುಂದುವರಿಸಿದರು.