ಕಾಸರಗೋಡು:ಆನ್‍ಲೈನ್ ವಂಚನಾ ಪ್ರಕರಣದ ಆರೋಪಿಯನ್ನು ಸೆರೆಹಿಡಿಯಲು ಆಗಮಿಸಿದ ಪೊಲೀಸರ ಮೇಲೆ ವಾಹನ ಡಿಕ್ಕಿಯಾಗಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಕೈನ್ನೋತ್ ನಿವಾಸಿ ಇಬ್ರಾಹಿಂ ಬಾದುಷ ಎಂಬಾತನ ವಿರುದ್ಧ ಮೇಲ್ಪರಂಬ ಠಾಣೆ ಪೊಲೀಸರು ಕೊಲೆ ಯತ್ನ ಮೊಕದ್ದಮೆ ದಾಖಲಿಸಿದ್ದಾರೆ.
ವಾಹನ ಡಿಕ್ಕಿಯಾಗಿಸಿದ ಪರಿಣಾಮ ಪಾಲ್ಘಾಟ್ ಮಂಗರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಪಿ. ಪ್ರತಾಪ್, ಸಿವಿಲ್ ಪೊಲೀಸ್ ಅಧಿಕಾರಿಗಳಾದ ಸಿ. ಸುಧೀಶ್ ಹಾಗೂ ಕೆ. ಸತೀಶ್ ಕುಮಾರ್ ಎಂಬವರು ಗಾಯಗೊಂಡಿದ್ದು, ಇವರು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆನ್‍ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭಾಂಶ ನೀಡುವುದಾಗಿ ಪಾಲ್ಘಾಟ್ ಮಣ್ಣೂರು ನಿವಾಸಿ ಮೋಹನದಾಸ್ ಎಂಬವರಿಂದ ಆರೋಪಿಗಳು 3.24ಲಕ್ಷ ರೂ. ಪಡೆದಿದ್ದು, ಹಣ ವಾಪಾಸು ಮಾಡದೆ ವಂಚಿಸಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಹಣ ಮೇಲ್ಪರಂಬ ಕೈನ್ನೋತ್ ನಿವಾಸಿ ª ಮಹಮ್ಮದ್ ಅಜ್ಮಲ್ ಎಂಬಾತನ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರು ಬ್ಯಾಂಕ್‍ನಲ್ಲಿ ಮಾಹಿತಿ ಸಂಗ್ರಹಿಸಿ ಅಜ್ಮಲ್ ಮೆನೆಗೆ ತೆರಳಿದಾಗ, ತನಗೆ ಇದರಿಂದ ಸಣ್ಣ ಲಾಭಾಂಶ ಮಾತ್ರ ಲಭಿಸಿದ್ದು, ಇಬ್ರಾಹಿಂ ಬಾದುಷಾ ಪ್ರಮುಖ ಸೂತ್ರಧಾರನಾಗಿರುವುದಾಗಿ ತಿಳಿಸಿದ್ದನು. ಈ ನಿಟ್ಟಿನಲ್ಲಿ ಇಬ್ರಾಹಿಂ ಬಾದುಷಾ ಮನೆಗೆ ಪೊಲೀಸರು ಆಗಮಿಸಿದಾಗ ಕಾರಿನಲ್ಲಿ ತಲುಪಿದ ಬಾದುಷ ಪೊಲೀಸರನ್ನು ತನ್ನ ವಾಹನ ಡಿಕ್ಕಿಯಾಗಿಸಿ ಪರಾರಿಯಾಗಿದ್ದನು.