ಕಾಸರಗೋಡು: ಕೋಮುಸಾಮರಸ್ಯಕ್ಕೆ ಧಕ್ಕೆಯಾಗುವ ರೀತಿಯ ಕೆಲವೊಂದು ಅಹಿತಕರ ಘಟನೆ ದ.ಕ ಜಿಲ್ಲೆಯ ವಿವಿಧೆಡೆ ನಡೆದಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ಪಾಲಿಸಿದ್ದಾರೆ. ಗಡಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶಾನುಸಾರ ಬಂದೋಬಸ್ತ್ ಹಾಗೂ ಗಸ್ತು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.
ತಲಪ್ಪಾಡಿ, ಕೆದುಂಬಾಡಿ, ಆನೆಕಲ್ಲು, ಪೆರ್ಲ-ಅಡ್ಕಸ್ಥಳ, ಆದೂರು, ಪಾಣತ್ತೂರು ಪ್ರದೇಶಗಳಲ್ಲಿ ಪೊಲೀಸರು ತಪಾಸಣಾ ಕಾರ್ಯ ಚುರುಕುಗೊಳಿಸಿದ್ದಾರೆ. ಅವಳಿ ಜಿಲ್ಲೆಗಳಿಂದ ಗಡಿ ಪ್ರವೇಶಿಸುತ್ತಿರುವ ವಾಹನಗಳ ಸಂಪೂರ್ಣ ಮಾಹಿತಿ ಪಡೆದುಕೊಂಡೇ ಪೊಲೀಸರು ವಾಹನಗಳನ್ನು ಮುಂದಕ್ಕೆ ಬಿಟ್ಟುಕೊಡುತ್ತಿದ್ದಾರೆ. ರಜ್ಯ ಪೊಲೀಸ್ ಗುಪ್ತಚರ ವಿಭಾಗಕ್ಕೆ ಲಭಿಸಿದ ಮಾಹಿತಿಯನ್ವಯ ವಾಹನಗಳಲ್ಲಿ ಸಂಚರಿಸುವ ಶಂಕಿತರನ್ನು ಸಮಗ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ.