ಡೆಹ್ರಾಡೂನ್ : ಮುಸ್ಲಿಂ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಯೊಬ್ಬಳು ಡೆಹ್ರಾಡೂನ್‌ನ ರೈಲು ನಿಲ್ದಾಣದಲ್ಲಿ ಹಿಂದೂ ಯುವಕನೊಂದಿಗೆ ಕಾಣಿಸಿಕೊಂಡಿದ್ದು, ಎರಡೂ ಸಮುದಾಯದ ನಡುವೆ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಭಯ ಸಮುದಾಯದವರು ಗುರುವಾರ ರಾತ್ರಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ರೈಲು ನಿಲ್ದಾಣದ ಹೊರಗೆ ಗಲಭೆ ನಡೆಸಿದ ಆರೋಪದಲ್ಲಿ 100ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, 21 ವರ್ಷದ ಯುವಕ ಮತ್ತು ಉತ್ತರ ಪ್ರದೇಶದ ಬದೌನ್‌ನ ಬಾಲಕಿ ಪ್ರೀತಿಸುತ್ತಿದ್ದರು. ಇಲ್ಲಿನ ಸೆಲಾಕೀಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವಕನನ್ನು ಭೇಟಿ ಮಾಡುವುದಕ್ಕಾಗಿ ಮನೆ ಬಿಟ್ಟು ಬಂದಿದ್ದ ಬಾಲಕಿ, ಡೆಹ್ರಾಡೂನ್ ತಲುಪಿದ ನಂತರ ಯುವಕನಿಗೆ ಕರೆ ಮಾಡಿದ್ದಳು. ಇಬ್ಬರೂ ರೈಲು ನಿಲ್ದಾಣದಲ್ಲಿ ರಾತ್ರಿ ಭೇಟಿಯಾಗಿದ್ದರು.
ರೈಲು ನಿಲ್ದಾಣದಲ್ಲಿ ಓಡಾಡುತ್ತಿದ್ದ ಅವರನ್ನು ಪ್ರಶ್ನಿಸಿದ್ದ ರೈಲ್ವೆ ಪೊಲೀಸರು, ಬಾಲಕಿಯ ಪೊಷಕರನ್ನು ಸಂಪರ್ಕಿಸಿದ್ದರು. ಈ ವೇಳೆ ಆಕೆಯ ಪೋಷಕರು ಬದೌನ್‌ನಲ್ಲಿ 'ನಾಪತ್ತೆ' ಪ್ರಕರಣ ದಾಖಲಿಸಿರುವುದು ತಿಳಿದುಬಂದಿತ್ತು. ಅಷ್ಟರಲ್ಲಾಗಲೇ, ಈ ಜೋಡಿ ನಿಲ್ದಾಣದಲ್ಲಿ ಓಡಾಡುತ್ತಿದ್ದ ಸುದ್ದಿ ಸ್ಥಳೀಯವಾಗಿ ಹರಡಿದ್ದರಿಂದ ಎರಡೂ ಸಮುದಾಯದವರು ನಿಲ್ದಾಣದ ಹೊರಗೆ ಜಮಾಯಿಸಿದ್ದರು ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್ ತಿಳಿಸಿದ್ದಾರೆ.
ಎರಡೂ ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪರಸ್ಪರ ಕಲ್ಲು ತೂರಾಟ ನಡೆಸಿದ್ದರು. ನಿಲ್ದಾಣದ ಹೊರಗೆ ಇದ್ದ ಹಲವು ವಾಹನಗಳಿಗೆ ಹಾನಿಯಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು ಎಂದು ಮಾಹಿತಿ ನೀಡಿದ್ದಾರೆ.
ಡಿನೋಟಿಫಿಕೇಷನ್: ಎಚ್‌ಡಿಕೆ ವಿಚಾರಣೆ ನಡೆಸಿದ ಲೋಕಾಯುಕ್ತ
ಘಟನೆಗೆ ಸಂಬಂಧಿಸಿದಂತೆ ವಿಕಾಸ್ ವರ್ಮಾ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಇದರ ಬೆನ್ನಲ್ಲೇ, ಪಲ್ತಾನ್ ಬಜಾರ್, ಘಂಟಾ ಘರ್ ಪ್ರದೇಶಗಳಲ್ಲಿಯೂ ಶುಕ್ರವಾರ ಮಧ್ಯಾಹ್ನ ಪರಿಸ್ಥಿತಿ ಬಿಗಡಾಯಿಸಿತ್ತು.
ವರ್ಮಾ ಬಂಧನ ಖಂಡಿಸಿ, ಸ್ಥಳೀಯರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದ್ದರು.
'ವಿಕಾಸ್ ವರ್ಮಾ ಹಿಂದುತ್ವದ ಧ್ವನಿ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಸ್‌ಎಸ್‌ಪಿ ಅವರನ್ನು ಅಮಾನತು ಮಾಡಬೇಕು' ಎಂದು ಬಜರಂಗ ದಳ ಮುಖಂಡ ಅನೂಜ್ ವಾಲಿಯಾ ಒತ್ತಾಯಿಸಿದ್ದರು.
ಆದರೆ, ವರ್ಮಾ ಅವರು ತಮ್ಮನ್ನು ಪೊಲೀಸರು ಬಂಧಿಸಿರಲಿಲ್ಲ. ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ಎಂಬುದಾಗಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡ ಬಳಿಕ ಪಲ್ತಾನ್ ಬಜಾರ್ ಪ್ರದೇಶದಲ್ಲಿ ಸಂಜೆ ಹೊತ್ತಿಗೆ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ.