ಕಳೆದ ಒಂದೆರೆಡು ವಾರಗಳಿಂದ ಮಾಲಿವುಡ್ನಲ್ಲಿ ದೊಡ್ಡ ವಿವಾದವೊಂದು ಭುಗಿಲೆದಿದ್ದು, 'ಕಾಸ್ಟಿಂಗ್ ಕೌಚ್' ಪದ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಪ್ರತ್ಯೇಕವಾಗಿ ಕೆ. ಹೇಮಾ ಕಮಿಟಿಯ ವರದಿ ಹೊರಬಿದ್ದ ಬಳಿಕ ಮಲಯಾಳಂ ಚಿತ್ರರಂಗದ ಸ್ಟಾರ್ ನಟಿಮಣಿಯರು ಸೇರಿದಂತೆ ಇನ್ನಿತರರು ಸಹ ತಮಗಾದ ಲೈಂಗಿಕ ಕಿರುಕುಳ ಅನುಭವ ಕುರಿತು ಮುಕ್ತವಾಗಿ ಕ್ಯಾಮರಾ ಮುಂದೆ ಹಂಚಿಕೊಳ್ಳುತ್ತಿದ್ದಾರೆ.
ಹೇಮಾ ಕಮಿಟಿ ವರದಿ ಹೊರಬಿದ್ದಿದ್ದೆ ತಡ ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಎನ್ನುವಂತೆ ಮಲಯಾಳಂ ಚಿತ್ರರಂಗದ ನಟಿಯರು ತಮಗಾದ ಲೈಂಗಿಕ ದೌರ್ಜನ್ಯ ಮತ್ತು ಕೆಟ್ಟ ಅನುಭವಗಳನ್ನು ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಕಣ್ಣೀರಿಡುತ್ತಿದ್ದಾರೆ. ವಿವಾದಗಳ ಕಾರ್ಮೋಡ ಕವಿದಿರುವ ಸಮಯದಲ್ಲಿ ಪಂಜಾಬಿ ನಟಿ ಕಾಮ್ಯಾ ನೀಡಿರುವ ಬೋಲ್ಡ್ ಹೇಳಿಕೆಗಳು ಮಾತ್ರ ಇದೀಗ ಸಖತ್ ಟ್ವಿಸ್ಟ್ ಕೊಟ್ಟಿದೆ. ಕಿರುತೆರೆ ಲೋಕದಲ್ಲಿ ಕಾಸ್ಟಿಂಗ್ ಕೌಚ್ ಎಲ್ಲಾ ನಡೆಯೋದಿಲ್ಲ. ಇಲ್ಲಿ ಅದಕ್ಕೆ ಜಾಗವು ಇಲ್ಲ. ಟೆಲಿವಿಷನ್ ಇಂಡಸ್ಟ್ರಿಯಲ್ಲಿ ಅಂತಹ ಪ್ರಕರಣಗಳು ನಡೆದಿರುವುದು ಬಹಳ ಕಡಿಮೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ನಟಿ, ಟೆಲಿವಿಷನ್ ಇಂಡಸ್ಟ್ರಿ ಬಹಳ ಶುದ್ಧವಾಗಿದೆ. ಉತ್ತಮ ಹೆಸರನ್ನು ಉಳಿಸಿಕೊಂಡಿದೆ. ಈ ಹಿಂದೆ ಏನಾಗಿದೆಯೋ ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಮತ್ತು ಅದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಈಗ ಅದು ತುಂಬಾ ಕ್ಲೀನ್ ಆಗಿದೆ. ಇಲ್ಲಿ ಯಾವುದೇ ರೀತಿಯ ಕೊಳಕು ಇಲ್ಲ, ಕಾಸ್ಟಿಂಗ್ ಕೌಚ್ ಪದ ಕೇಳಿಬರಲ್ಲ. ಒಂದು ಪಾತ್ರಕ್ಕಾಗಿ ಇಲ್ಯಾರು ಯಾರೊಬ್ಬರ ಜತೆ ನೀನು ಮಲುಗಬೇಕು ಎಂದು ಹೇಳಿಲ್ಲ, ಹೇಳುತ್ತಿಲ್ಲ ಎಂದರು.
ಯಾರು ಯಾರನ್ನು ಯಾವುದಕ್ಕೂ ಬಲವಂತ ಮಾಡೋದಿಲ್ಲ. 'ಕೆಲವರು ಅಂತಹ ಘಟನೆಗಳು ನಡೆದಿವೆ ಎಂದು ಹೇಳಿರುವುದನ್ನು ಕೇಳಿದ್ದೇನೆ. ಆದರೆ, ಒಂದಂತು ನಿಜ, ಮಹಿಳೆ ಬಯಸದಿದ್ದರೆ, ಇದ್ಯಾವುದು ಆಗುವುದಿಲ್ಲ. ನನ್ನ ಪ್ರಕಾರ ಹೇಳುವುದಾದರೆ ಚಿತ್ರರಂಗ ಹೇಗೆ ಗೊತ್ತಿಲ್ಲ. ಆದ್ರೆ, ಕಿರುತೆರೆ ಉದ್ಯಮದಲ್ಲಿ ಇದು ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಏನಿದು ಹೇಮಾ ಸಮಿತಿ ವರದಿ? ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು.