ಎರ್ನಾಕುಳಂ: ಹೇಮಾ ಸಮಿತಿ ವರದಿಯ ನಂತರ ಬಂದಿರುವ ದೂರುಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಸದ್ಯ ನಡೆಯುತ್ತಿರುವ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಹೇಮಾ ಸಮಿತಿಯ ಮುಂದೆ ಹೇಳಿಕೆ ನೀಡಿದ ಜನರಿಗೆ ಭದ್ರತೆ ಒದಗಿಸಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ವಕೀಲರಾದ ಎ ಜನ್ನತ್ ಮತ್ತು ಅಮ್ಯತಾ ಪ್ರೇಮ್‍ಜಿತ್ ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದರು.
ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆಗೆ ಕಾನೂನು ಬೇಕು. ಹೇಮಾ ಸಮಿತಿಯ ಮುಂದೆ ಹೇಳಿಕೆ ನೀಡಿದ ಮಹಿಳೆಯರು ಮತ್ತು ಲೈಂಗಿಕ ಕಿರುಕುಳದ ಆರೋಪ ಮಾಡಿದ ಮಹಿಳೆಯರು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರ ರಕ್ಷಣೆಯನ್ನು ಖಾತ್ರಿಪಡಿಸಬೇಕು. ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳನ್ನು ವ್ಯವಹರಿಸಲು ವಿಶೇಷ ನ್ಯಾಯಾಲಯದ ಅಗತ್ಯವಿದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.
ಜಯಸೂರ್ಯ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ ನಂತರ ಯುವ ನಟಿ ತನಗೆ ಹಲವು ಬೆದರಿಕೆಗಳು ಬಂದಿವೆ ಎಂದು ಫೇಸ್‍ಬುಕ್ ಮೂಲಕ ತಿಳಿಸಿದ್ದರು. ಸುಳ್ಳು ಕೇಸ್ ಆಗಿದ್ದರೆ ಉಳಿದದ್ದನ್ನು ನೋಡಿಕೊಳ್ಳುತ್ತೇವೆ ಎಂದು ಯುವತಿಗೆ ಹಲವು ಬೆದರಿಕೆಗಳು ಬಂದಿವೆ ಎನ್ನಲಾಗಿದೆ.