ನವದೆಹಲಿ: ಶ್ವಾಸಕೋಶದ ಸೋಂಕಿನಿಂದ ನಿಧನರಾದ ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಅವರ ಮೃತದೇಹವನ್ನು ಪಕ್ಷದ ಕೆಂಪು ಬಾವುಟದಲ್ಲಿ ಸುತ್ತಿ ಶನಿವಾರ ಏಮ್ಸ್‌ಗೆ ಹಸ್ತಾಂತರಿಸಲಾಗಿದೆ.
ನವದೆಹಲಿ: ಶ್ವಾಸಕೋಶದ ಸೋಂಕಿನಿಂದ ನಿಧನರಾದ ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಅವರ ಮೃತದೇಹವನ್ನು ಪಕ್ಷದ ಕೆಂಪು ಬಾವುಟದಲ್ಲಿ ಸುತ್ತಿ ಶನಿವಾರ ಏಮ್ಸ್‌ಗೆ ಹಸ್ತಾಂತರಿಸಲಾಗಿದೆ.
ಮೃತದೇಹ ಹಸ್ತಾಂತರದ ವೇಳೆ 'ಲಾಲ್ ಸಲಾಮ್' ಎನ್ನುವ ಘೋಷಣೆ ಮೊಳಗಿತ್ತು. ಇದಕ್ಕೂ ಮೊದಲು ದೆಹಲಿಯ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಚೇರಿಯಲ್ಲಿ ಯೆಚೂರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಜೈರಾಮ್ ರಮೇಶ್, ರಾಜೀವ್ ಶುಕ್ಲಾ ಹಾಗೂ ಎನ್‌ಸಿಪಿ ನಾಯಕ ಶರದ್ ಪವಾರ್, ಸಚಿನ್ ಪೈಲಟ್ ಸೇರಿದಂತೆ ಹಲವರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಚೀನಾದ ರಾಯಭಾರಿ ಕ್ಸು ಫೀಹಾಂಗ್, ವಿಯೆಟ್ನಾಂ ರಾಯಭಾರಿ ನ್ಗುಯೆನ್ ಥಾನ್ ಹೈ, ಪ್ಯಾಲೆಸ್ಟೀನ್ ರಾಯಭಾರಿ ಅದ್ನಾನ್ ಅಬು ಅಲ್ಹೈಜಾ, ನೇಪಾಳದ ಮಾಜಿ ಪ್ರಧಾನಿ ಮಾಧವ್ ಕುಮಾರ್ ನೇಪಾಳ, ಮಾಜಿ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ವಜಾಹತ್ ಹಬೀಬುಲ್ಲಾ ಮತ್ತು ಇತಿಹಾಸಕಾರ ರೊಮಿಲಾ ಥಾಪರ್ ಕೂಡ ಯೆಚೂರಿ ಅವರ ಅಂತಿಮ ದರ್ಶನ ಪಡೆದರು.
ಉಸಿರಾಟ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದ ಯೆಚೂರಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಗುರುವಾರ (ಸೆ.12) ಮೃತರಾದರು.